ಕ್ರಿಸ್ಮಸ್ (Christmas) ಹಬ್ಬದ ಸಂದರ್ಭದಲ್ಲಿ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ನೀಡುವ ಸಾಂತಾ ಕ್ಲಾಸ್ (Santa Claus) ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ.
ಸಾಂತಾ ಕ್ಲಾಸ್ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದರೆ ಆತ ದೇವದೂತ. ಕ್ರಿಸ್ಮಸ್ ಹಬ್ಬದಂದು ಮೇಲಿನಿಂದ ಇಳಿದು ಬಂದು ಉಡುಗೊರೆ (Gift) ನೀಡಿ ಮರಳಿ ಹೋಗುತ್ತಾನೆ ಎಂದು ಪೋಷಕರು ಹೇಳುತ್ತಿರುತ್ತಾರೆ. ಆದರೆ ನಿಜವಾದ ಸಾಂತಾ ಕ್ಲಾಸನ ಕಥೆ ಬೇರೆಯೇ ಇದೆ.
ಬಹಳ ಹಿಂದೆ ಟರ್ಕಿಯ (Turkey) ಮೈರಾ ನಗರದಲ್ಲಿ ಸೇಂಟ್ ನಿಕೋಲಸ್ (Saint Nicholas) ಎಂಬ ವ್ಯಕ್ತಿ ನೆಲೆಸಿದ್ದ. ಶ್ರೀಮಂತನಾಗಿದ್ದ ಈತ ಜನರಿಗೆ ಸಹಾಯ ಮಾಡುವುದರಲ್ಲೇ ಸಂತೋಷ ಅನುಭವಿಸುತ್ತಿದ್ದ. ಮಕ್ಕಳು ದು:ಖದಲ್ಲಿದ್ದರೆ ವಿಶೇಷವಾದ ಉಡುಪು ತೊಟ್ಟು ಅವರಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಎಲ್ಲರೂ ಸಂತೋಷವಾಗಿರಬೇಕು ಎಂದು ಆತ ಬಯಸುತ್ತಿದ್ದ.
17ನೇ ವಯಸ್ಸಿನಲ್ಲಿ ಪಾದ್ರಿಯಾದ ಸೇಂಟ್ ನಿಕೋಲಸ್ ತನ್ನ ಜೀವನದುದ್ದಕ್ಕೂ ಮಧ್ಯರಾತ್ರಿಯಲ್ಲಿ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಒಂದು ಬಾರಿ ಊರಿನಲ್ಲಿ ವರದಕ್ಷಿಣೆ ಕೊಡಲು ಹಣವಿಲ್ಲದೆ ಮೂವರು ಹುಡುಗಿಯರ ಮದುವೆ ನಿಂತು ಹೋಗುವ ಪರಿಸ್ಥಿತಿ ಬಂದಿತ್ತು. ಈ ವಿಚಾರ ತಿಳಿದ ಸಂತ ನಿಕೊಲಾಸ್ ಮೂರು ಥೈಲಿ ಹಣವನ್ನು ಕ್ರಿಸ್ಮಸ್ ಹಬ್ಬದಂದು ಕಿಟಕಿಯ ಮೂಲಕ ಒಳಗೆಸೆದು ಅವರಿಗೆ ಸಂತೋಷ ಉಂಟುಮಾಡಿದ್ದ. ಇದನ್ನೂ ಓದಿ: ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?
ನಿಕೋಲಸ್ ಹೆಸರಿನ ರೂಪಾಂತರವೇ ಸಾಂತಾಕ್ಲಾಸ್. ಈ ಕಾರಣಕ್ಕೆ ನಿದ್ರೆ ಮಾಡುತ್ತಿರುವ ಮಕ್ಕಳ ಹಾಸಿಗೆ ಬದಿಯಲ್ಲಿ ಕ್ರಿಸ್ಮಸ್ ಬಹುಮಾನಗಳನ್ನು ಇಟ್ಟುಹೋಗುವುದು ಸಂಪ್ರದಾಯ ಆರಂಭಗೊಂಡಿದೆ.
ನಿಕೋಲಸ್ ಸಾವಿನ ನಂತರ ಚರ್ಚ್ ಅನುಯಾಯಿಗಳು ಈ ಪರಂಪರೆಯನ್ನು ಮುಂದುವರೆಸಿದರು. ಅಂದಿನಿಂದ ಈ ಕ್ರಮ ಒಂದು ಆಚರಣೆಯಾಗಿ ವಿಶ್ವಾದ್ಯಂತ ಪಸರಿಸಿತು. ಕುಟುಂಬದ ಹಿರಿಯರು ನಿಕೋಲಸ್ ತೊಡುತ್ತಿದ್ದಂತಹ ಉಡುಗೆ ಧರಿಸಿ ಮಕ್ಕಳಿಗಾಗಿ ಉಡುಗೊರೆಗಳನ್ನು ನೀಡಲಾರಂಭಿಸಿದರು. ಹೀಗೆ ಬಿಳಿಯ ಗಡ್ಡ, ಕೆಂಪು ಬಣ್ಣದ ಉಡುಗೆಯೊಂದಿಗೆ ಗಿಫ್ಟ್ ನೀಡುವ ಹಿರಿಯ ವ್ಯಕ್ತಿಯನ್ನು ಇಂದಿಗೂ ಮಕ್ಕಳು ಸಾಂತಾ ಕ್ಲಾಸ್ ಎಂದು ನಂಬುತ್ತಾರೆ.