ಮಧ್ಯಪ್ರಾಚ್ಯ ಯುದ್ಧದಿಂದಾಗಿ (Middle East War) ವಿಶ್ವದೆಲ್ಲೆಡೆ ತೈಲ ಹಾಗೂ ಅನಿಲದ ಅಭಾವ ಎದುರಾಗಿದೆ. ದೇಶದಲ್ಲಿಯೂ ಕೂಡ ಗೃಹಬಳಕೆ ಸೇರಿದಂತೆ ಆಟೋ ಗ್ಯಾಸ್, ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಜನರು ಹಾಗೂ ಸರ್ಕಾರಗಳು ಎಲ್‌ಪಿಜಿ (LPG) ಸಿಲಿಂಡರ್ ಹೊರತಾಗಿ ಬೇರೆ ಪರಿಹಾರವನ್ನ ಹುಡುಕುತ್ತಿದ್ದಾರೆ. ಜೊತೆಗೆ ಎಲ್‌ಪಿಜಿ ಸಿಲೆಂಡರ್‌ಗಳ ಪೂರೈಕೆ ಬಗ್ಗೆಯೂ ಚಿಂತನೆ ನಡೆಯುತ್ತಿದೆ .ಹೀಗಾಗಿ ಎಲ್‌ಪಿಜಿ ಬದಲಿಗೆ ಪಿಎನ್‌ಜಿ (PNG_ ರಾಮಬಾಣವಾಗಿ ಕೆಲಸ ಮಾಡಲಿದೆ. ಹೇಗೆ? ಇದು ಎಲ್ಲಿ ಸಿಗುತ್ತೆ? ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕೊಲ್ಲಿ ಸಂಘರ್ಷ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ-ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತವು ಮಧ್ಯ ಪ್ರಾಚ್ಯ ಯುದ್ಧ ಆರಂಭಕ್ಕೂ ಮುನ್ನ ದೇಶದಲ್ಲಿ ಬಳಸುವ 60ರಷ್ಟು ಭಾಗದ ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಕೊಲ್ಲಿ ಯುದ್ಧ ನಡೆಯುತ್ತಿರುವುದರಿಂದ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ದೇಶದ ಜನರಿಗೆ ಯುದ್ಧ ಸಂಕಷ್ಟ ತಂದೊಡ್ಡಿದೆ. ಈಗಾಗಲೇ ಹಲವು ಹಡಗುಗಳು ಜಲಸಂಧಿಯಿಂದ ಹೊರಟು ಭಾರತಕ್ಕೆ ತಲುಪಿದ್ದು ಸಮಸ್ಯೆಯನ್ನು ಕಡಿಮೆ ಮಾಡುವತ್ತ ಸಾಗಿದೆ. ಆದರೂ ಕೂಡ ಎಲ್‌ಪಿಜಿ ಬದಲಿಗೆ ಪಿಎನ್‌ಜಿ ಹೇಗೆ ಕಾರ್ಯನಿರ್ವಹಿಸಲಿದ ಎನ್ನುವುದು ಒಂದು ಮುಖ್ಯ ಸಂಗತಿ.

ಈ ಯುದ್ಧ ಬಿಕ್ಕಟ್ಟಿನ ನಡುವೆ, ಎಲ್‌ಪಿಜಿ ಹೊರತಾಗಿಯೂ ಕೇಂದ್ರ ಸರ್ಕಾರ ದೀರ್ಘಾವಧಿಯ, ವಿಶ್ವಾಸಾರ್ಹ ಕೊಳವೆ ಆಧಾರಿತ ನೈಸರ್ಗಿಕ ಅನಿಲ (ಪಿಎನ್‌ಜಿ) ಬಳಕೆ ಮತ್ತು ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಲು ಯೋಚಿಸುತ್ತಿದೆ. ಈ ಮೂಲಕ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಸದ್ಯದ ಪರಿಸ್ಥಿತಿಯಂತೆ ಆಗದಿರಲು ಚಿಂತಿಸುತ್ತಿದೆ.
ಏನಿದು ಪಿಎನ್‌ಜಿ?
ಭೂಮಿಯ ಅಡಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಅನಿಲವೇ ನೈಸರ್ಗಿಕ ಅನಿಲ (Natural Gas). ಇದನ್ನು ಪೈಪ್ ಲೈನ್ ಗಳ ಮೂಲಕ ನೇರವಾಗಿ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ವ್ಯವಸ್ಥೆಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (Piped Natural Gas) (ಪಿಎನ್‌ಜಿ) ಎಂಬ ಕರೆಯಲಾಗುತ್ತದೆ. ನೈಸರ್ಗಿಕ ಅನಿಲ ಮುಖ್ಯವಾಗಿ ಮಿಥೇನ್ ಒಳಗೊಂಡಿರುತ್ತದೆ.
ಪೂರೈಕೆ ಮತ್ತು ಸಂಗ್ರಹಣೆ ಹೇಗೆ?
ಇದನ್ನು ಸಂಗ್ರಹಿಸಿಡಲು, ಪೂರೈಕೆ ಮಾಡಲು ಸಿಲಿಂಡರ್ ಅಗತ್ಯವಿಲ್ಲ ಪೈಪ್‌ಗಳ ಮೂಲಕ ಇದನ್ನು ನಿರಂತರವಾಗಿ ಪೂರೈಸಬಹುದಾಗಿದೆ.
ಏನಿದು ಎಲ್‌ಪಿಜಿ?
ಹೈಡೋಕಾರ್ಬನ್‌ಗಳಾದ ಪ್ರೋಪೇನ್ ಮತ್ತು ಬ್ಯೂಟೇನ್ ಅನಿಲಗಳ ಮಿಶ್ರಣವೇ ಎಲ್‌ಪಿಜಿ. ಕಚ್ಚಾ ತೈಲ ಸಂಸ್ಕರಣೆ ವೇಳೆ ಉಪಉತ್ಪನ್ನವಾಗಿ ಲಭಿಸುವ ಈ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ದ್ರವೀಕರಿಸಿ ಸಿಲಿಂಡರ್‌ಗಳಲ್ಲಿ ತುಂಬಲಾಗುತ್ತದೆ. ಬಳಿಕ ಅವುಗಳನ್ನು ಮನೆ ಮನೆಗೆ ರವಾನಿಸಲಾಗುತ್ತದೆ.

ಇವುಗಳ ಸಂಸ್ಕರಣೆ ಹೇಗೆ?
ಭಾರತ ಬೇರೆ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಕಚ್ಚಾ ತೈಲವನ್ನು ಸಂಸ್ಕರಿಸುವಾಗ ಅಲ್ಪ ಪ್ರಮಾಣದ ಎಲ್‌ಪಿಜಿಯನ್ನು ಉತ್ಪಾದಿಸುತ್ತದೆ. ಇದರ ಹೊರತಾಗಿ ದೇಶಕ್ಕೆ ಅಗತ್ಯವಾಗುವ ಎಲ್‌ಪಿಜಿಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲ ಹಾಗೂ ಎಲ್‌ಪಿಜಿ ಎರಡನ್ನು ಕೂಡ ಭಾರತ ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತದೆ.
ಇನ್ನು ಪಿಎನ್‌ಜಿಯನ್ನು ಉತ್ಪಾದಿಸಲು ಅವಶ್ಯಕವಾಗುವ ನೈಸರ್ಗಿಕ ಅನಿಲ ಭಾರತದ ಭೂಗರ್ಭದಲ್ಲಿಯೇ ಸಿಗುತ್ತದೆ. ಆಂಧ್ರಪ್ರದೇಶದ ಕರಾವಳಿ ತೀರದಲ್ಲಿರುವ ಕೃಷ್ಣ ಗೋದಾವರಿ ಮುಖಜಭೂಮಿ, ಅಸ್ಸಾಂ ಮತ್ತು ಈಶಾನ್ಯ ಭಾರತ ದಿಬ್ಬೋಯಿಯಲ್ಲಿ ನೈಸರ್ಗಿಕ ಅನಿಲ ದೊರೆಯುತ್ತದೆ. ಇಲ್ಲಿನ ತೈಲ ಮತ್ತು ಅನಿಲ ಗಣಿಗಳು ಶೇಕಡ 30ರಷ್ಟು ನೈಸರ್ಗಿಕ ಅನಿಲ ಉತ್ಪಾದನೆಗೆ ಕೊಡುಗೆ ನೀಡುತ್ತದೆ. ಹೀಗಾಗಿ ಭಾರತಕ್ಕೆ ಬೇಕಾಗುವ ಪಿಎನ್‌ಜಿ ತಯಾರಿಸಲು ಅವಶ್ಯಕವಾದ ಅನಿಲ ಇಲ್ಲಿ ದೊರೆಯುತ್ತದೆ. ಈ ಮೂಲಕ ದೇಶೀಯ ಉತ್ಪಾದನೆಯ ಜೊತೆಗೆ ಪಿಎನ್‌ಜಿ ಉತ್ಪಾದಿಸುತ್ತದೆ.

ಎಲ್ಪಿಜಿ ಬದಲಾಗಿ ಪಿಎನ್‌ಜಿ ಉಪಯೋಗಿಸುವುದರಿಂದ ಏನು ಲಾಭ?
ಸಾಮಾನ್ಯವಾಗಿ ಎಲ್‌ಪಿಜಿ ಆಮದು ಸೇರಿದಂತೆ ಕಚ್ಚಾ ತೈಲದಿಂದ ಭಾರತ ತಯಾರಿಸುವ ಎಲ್‌ಪಿಜಿಗೆ ತಗಲುವ ವೆಚ್ಚ ಹೆಚ್ಚಾಗಿದೆ. ಆದರೆ ಎಲ್‌ಪಿಜಿಗೆ ಹೋಲಿಸಿದಾಗ ಪಿ ಎನ್ ಜಿ ಗೆ ತಗಲುವ ವೆಚ್ಚ ಕಡಿಮೆ ಮತ್ತು ಗ್ರಾಹಕರ ಪಾಲಿಗೆ ಶೇ 20 ರಿಂದ 30 ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಪ್ರಾರಂಭದಲ್ಲಿ ಸರ್ಕಾರ ಪಿಎನ್‌ಜಿ ಪೂರೈಸಲು ಅಳವಡಿಸಬೇಕಾದ ಪೈಪ್‌ಗಳ ವ್ಯವಸ್ಥೆಗೆ ಹೊರೆಯಾಗಬಹುದು. ಆದರೆ ಒಂದು ಬಾರಿ ಪೈಪ್ ವ್ಯವಸ್ಥೆ ಮಾಡಿದ ಬಳಿಕ ಇದು ದೀರ್ಘಾವಧಿ ಬಾಳಿಕೆ ಬರುತ್ತದೆ. ಈ ವಿತರಣಾ ಜಾಲ ಲಾಭದಾಯಕವಾಗಿರುತ್ತದೆ. ಇನ್ನು ಯಾವುದೇ ಕನಿಷ್ಠ ಬಳಕೆಯ ಮಿತಿ ಇಲ್ಲದೆ ಮೊದಲು ಬಳಸಿ ನಂತರ ಪಾವತಿಸುವ ಅವಕಾಶವಿರುತ್ತದೆ. ಎಲ್‌ಪಿಜಿ ಉಪಯೋಗಿಸುವಾಗ ಸಿಲಿಂಡರ್ ಖಾಲಿಯಾಗುವ ಮುನ್ನ ಬುಕಿಂಗ್ ಹಾಗೂ ಡೆಲಿವರಿಯ ಅವಕಾಶವಿರುತ್ತದೆ. ಆದರೆ ಪಿಎನ್‌ಜಿ ಯಲ್ಲಿ ಪೈಪ್‌ಗಳ ಮೂಲಕ ನಿರಂತರವಾಗಿ ಅನಿಲ ಪೂರೈಕೆ ಆಗುತ್ತಿರುತ್ತದೆ.
ಇನ್ನು ಸುರಕ್ಷತೆಯ ದೃಷ್ಟಿಯಲ್ಲಿ ಎಲ್‌ಪಿಜಿಗೆ ಹೋಲಿಸಿದರೆ ಪಿಎನ್‌ಜಿ ಹೆಚ್ಚು ಸುರಕ್ಷಿತವಾಗಿದೆ. ಪಿಎನ್‌ಜಿ ವಾತಾವರಣದಲ್ಲಿನ ಗಾಳಿಗಿಂತ ಹಗುರವಾಗಿದ್ದು, ಒಂದು ವೇಳೆ ಸೋರಿಕೆಯಾದರೆ ತಕ್ಷಣವೇ ಕೀಟಕಿಗಳ ಮೂಲಕ ಹೊರ ಹೋಗುತ್ತದೆ. ಆದರೆ ಎಲ್‌ಪಿಜಿ ಗಾಳಿಗಿಂತ ತೂಕವಾಗಿದ್ದು, ಮುಚ್ಚಿದ ಕೋಣೆಯ ನೆಲದ ಮೇಲೆ ಹರಡಿಕೊಳ್ಳುತ್ತದೆ. ಇದರಿಂದ ಅಪಾಯ ಹೆಚ್ಚಾಗಿ ಮನೆ, ಕಟ್ಟಡಗಳು ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ.

ಪಿಎನ್‌ಜಿಗಾಗಿ ಅಳವಡಿಸಿರುವ ಪೈಪ್ ಗಳಲ್ಲಿ ಒತ್ತಡ ಸಿಲಿಂಡರ್ ಗಿಂತ ಹಲವು ಪಟ್ಟು ಕಡಿಮೆಯಾಗಿರುತ್ತದೆ. ಒಂದು ವೇಳೆ ಏಕಾಏಕಿ ಬೆಂಕಿ ಬಿದ್ದರೂ ಕೂಡ ಸ್ಪೋಟಗೊಳ್ಳುವ ಸಾಧ್ಯತೆ ಕಡಿಮೆ ಆಗಿರುತ್ತದೆ.
ಸದ್ಯ ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಎಲ್‌ಪಿಜಿ ಪೂರೈಕೆ ವಲಯದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ. ಜೊತೆಗೆ ಇರಾನ್‌ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಆಮದು ವೆಚ್ಚವು ವಿಪರೀತವಾಗಿ ಹೆಚ್ಚಾಗಿದೆ. ಎಲ್‌ಪಿಜಿ ಹೊರತಾಗಿ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಮಾತ್ರ ಪಿಎನ್‌ಜಿ ಸೌಲಭ್ಯವಿದೆ. ಇನ್ನುಳಿದ ದೇಶದ ಬಹುತೇಕ ಪ್ರದೇಶಗಳಲ್ಲಿ ಜನರು ಎಲ್‌ಪಿಜಿಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಪಿಎನ್‌ಜಿ ಸಂಪರ್ಕವಿದ್ದರೂ ಕೂಡ ಎಲ್‌ಪಿಜಿ ಪಡೆಯುವ ಕುಟುಂಬಗಳು ಎಲ್‌ಪಿಜಿ ಸೇವೆಯನ್ನ ಬಿಟ್ಟು ಕೊಡುವಂತೆ ಕೇಂದ್ರ ಸರ್ಕಾರ ಮೂರು ತಿಂಗಳ ಗಡವು ನೀಡಿದೆ. ಇದರ ಜೊತೆಗೆ ಪಿಎನ್‌ಜಿಯ ಸೌಕರ್ಯವನ್ನು ವಿಸ್ತರಿಸಲು ಸರ್ಕಾರ ಗಮನಹರಿಸಿದ. ಇನ್ನು ಪಿಎನ್‌ಜಿ ಅಳವಡಿಕೆಯಿಂದ ಸಿಲಿಂಡರ್ ಕಳ್ಳತನ ಮತ್ತು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾಗುವುದನ್ನು ತಡೆಯಬಹುದು ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದೆ.

ಕರ್ನಾಟಕದ ಯಾವ ಪ್ರದೇಶಗಳಲ್ಲಿ ಪಿಎನ್‌ಜಿ ಅಭ್ಯವಿದೆ?
ರಾಜ್ಯದ ಕೆಲ ಗ್ಯಾಸ್ ಏಜೆನ್ಸಿಗಳು ಪಿಎನ್‌ಜಿ ಜಾಲವನ್ನು ನೀಡುತ್ತಿದೆ. ಬೆಂಗಳೂರಿನ ಎಸ್ ಹೆಚ್ ಆರ್ ಲೇಔಟ್, ಜಿಗಣಿ, ವೈಟ್ ಫೀಲ್ಡ್, ಪೀಣ್ಯ ಮತ್ತು ಧಣಿಸಂದ್ರ ಪ್ರದೇಶದ ಹಲವೆಡೆ ಪಿಎನ್‌ಜಿ ಪೈಪ್ಲೈನ್ ಮೂಲಕ ಮನೆಗಳಿಗೆ ಗ್ಯಾಸ್ ವ್ಯವಸ್ಥೆ ಇದೆ. ಮಹಾರಾಷ್ಟ್ರದಿಂದ ಬೆಂಗಳೂರಿಗೆ ನೈಸರ್ಗಿಕ ಅನಿಲ ಪೈಪ್ಲೈನ್ ಎಳೆಯಲಾಗಿದ್ದು,ಇದರ ಮಧ್ಯದಲ್ಲಿ ಬರುವ ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ತುಮಕೂರು ನಗರಗಳಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಇನ್ನು ಈಗಾಗಲೇ ಕೆಲವೆಡೆ ಸಂಪರ್ಕ ನೀಡಲಾಗಿದೆ. ಮೈಸೂರಿನಲ್ಲಿ ಕಾಮಗಾರಿ ನಡೆಯುತ್ತಿದೆ.
ಪಿಎನ್‌ಜಿ ಸಿಲಿಂಡರ್ ಬಳಸುವುದರಿಂದ ಗ್ಯಾಸ್ ಲೀಕ್ ಆಗುವ ಸಮಸ್ಯೆ ಇಲ್ಲ. ಜೊತೆಗೆ ಗ್ಯಾಸ್ ಸಿಲಿಂಡರ್ ಇಡಲು ಜಾಗದ ಅವಶ್ಯಕತೆ ಇಲ್ಲ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡುವ ಕಿರಿಕಿರಿಯು ಇಲ್ಲ ಹಾಗೂ ಗ್ಯಾಸ್ ಖಾಲಿಯಾಗುವ ಆತಂಕ ಇರುವುದಿಲ್ಲ.

