LatestLeading NewsMain PostSmartphonesTech

ಮೇಡ್‌ ಇನ್‌ ಇಂಡಿಯಾ BharOS ಬಿಡುಗಡೆ – ಆಂಡ್ರಾಯ್ಡ್‌ಗಿಂತ ಭಿನ್ನ ಹೇಗೆ?

ನವದೆಹಲಿ: ಐಐಟಿ ಮದ್ರಾಸ್‌ ಅಭಿವೃದ್ಧಿ ಪಡಿಸಿದ ಮೇಡ್‌ ಇನ್‌ ಇಂಡಿಯಾ BharOS ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ (Mobile Operating System) ಇಂದು ಲೋಕಾರ್ಪಣೆಯಾಗಿದೆ.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು BharOS ಬಿಡುಗಡೆ ಮಾಡಿದರು. ಈ ವೇಳೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಧರ್ಮೇಂದ್ರ ಪ್ರಧಾನ್‌, ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದ್ದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಎಂಟು ವರ್ಷಗಳ ಹಿಂದೆ ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಡಿಜಿಟಲ್ ಇಂಡಿಯಾದ ಬಗ್ಗೆ ಮೊದಲ ಬಾರಿಗೆ ಮಾತನಾಡಿದಾಗ ನಮ್ಮ ಕೆಲವು ಸ್ನೇಹಿತರು ಅವರನ್ನು ಅಪಹಾಸ್ಯ ಮಾಡಿದರು. ಆದರೆ ಇಂದು ತಂತ್ರಜ್ಞರು, ನವೋದ್ಯಮಿಗಳು, ಉದ್ಯಮಗಳು ಮತ್ತು ನೀತಿ ನಿರೂಪಕರು ಮತ್ತು ಶೈಕ್ಷಣಿಕ ಸಂಸ್ಥೆಗಳು ಎಂಟು ವರ್ಷಗಳ ನಂತರ ಮೋದಿಯವರ ದೃಷ್ಟಿಕೋನವನ್ನು ಒಪ್ಪಿಕೊಂಡಿದ್ದಾರೆ ಎಂದರು.

ಏನಿದು BharOS?
BharOS ಒಂದು AOSP (ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್) ಆಪರೇಟಿಂಗ್ ಸಿಸ್ಟಮ್ ಆಗಿದ್ದು ಅದನ್ನು ಸುರಕ್ಷಿತ ಮತ್ತು ಶಕ್ತಿಯುತವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಐಐಟಿ ಮದ್ರಾಸ್‌ನ (IIT Madras) ಲಾಭ ರಹಿತ ಸಂಸ್ಥೆ JandK ಆಪರೇಷನ್ಸ್ ಪ್ರೈವೇಟ್ ಲಿಮಿಟೆಡ್ (JandKops) ಅಭಿವೃದ್ಧಿಪಡಿಸಿದೆ.

ಆಂಡ್ರಾಯ್ಡ್‌ಗಿಂತ ಇದು ಭಿನ್ನವೇ?
ತಾಂತ್ರಿಕವಾಗಿ ಈ ಓಎಸ್‌ ಗೂಗಲ್‌ (Google) ಆಂಡ್ರಾಯ್ಡ್‌ಗಿಂತ (Android) ಭಿನ್ನವಾಗಿಲ್ಲ. BharOS ಮತ್ತು ಗೂಗಲ್‌ ಆಂಡ್ರಾಯ್ಡ್‌ ಓಎಸ್‌ ನಡುವಿನ ಪ್ರಮುಖ ವ್ಯತ್ಯಾಸ ಏನೆಂದರೆ BharOS ಓಎಸ್‌ ಗೂಗಲ್‌ ಸೇವೆಗಳನ್ನು ನೀಡುವುದಿಲ್ಲ. ಪ್ರಿಲೋಡೆಡ್‌ ಗೂಗಲ್‌ ಅಪ್ಲಿಕೇಶನ್‌ಗಳು ಇರುವುದಿಲ್ಲ. ಬೋಲ್ಟ್‌ವೇರ್‌ ಅಥವಾ ಅನಗತ್ಯ ಪ್ರಿಲೋಡೆಡ್‌ ಅಪ್ಲಿಕೇಶನ್‌ಗಳು ಇರುವುದಿಲ್ಲ. ಗೂಗಲ್‌ ಪ್ಲೇ ಸ್ಟೋರ್‌ ಇಲ್ಲದ ಕಾರಣ ಬಳಕೆದಾರರು ಹೊರಗಡೆಯಿಂದ ಥರ್ಡ್‌ ಪಾರ್ಟಿ ಆಪ್‌ ಡೌನ್‌ಲೋಡ್‌ ಮಾಡಬೇಕಾಗುತ್ತದೆ.

https://twitter.com/dpradhanbjp/status/1617745055980326912

ಎಲ್ಲರೂ ಬಳಕೆ ಮಾಡಬಹುದೇ?
ಸದ್ಯಕ್ಕೆ ಈ ಓಎಸ್‌ ಜನ ಸಾಮಾನ್ಯರ ಬಳಕೆಗೆ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಬೇಕಿದೆ. ಸ್ಮಾರ್ಟ್‌ಫೋನ್‌ ಕಂಪನಿಗಳು ಒಪ್ಪಂದ ಮಾಡಿಕೊಂಡು ಈ ಓಸ್‌ನೊಂದಿಗೆ ಫೋನ್‌ ಬಿಡುಗಡೆ ಮಾಡಿದರೆ ಆಗ ಜನ ಸಾಮಾನ್ಯರ ಬಳಕೆಗೆ ಲಭ್ಯವಾಗಲಿದೆ.

ಯಾರು ಬಳಕೆ ಮಾಡಬಹುದು?
ಗೂಗಲ್‌ ಆಂಡ್ರಾಯ್ಡ್‌ ಅಭಿವೃದ್ಧಿ ಪಡಿಸಿದ್ದರೆ ಆಪಲ್‌ ಐಓಎಸ್‌ ಅನ್ನು ಅಭಿವೃದ್ಧಿ ಪಡಿಸಿದೆ. ಎರಡೂ ಅಮೆರಿಕದ ಕಂಪನಿಗಳು. ಈ ಕಾರಣಕ್ಕೆ ಕಟ್ಟುನಿಟ್ಟಾದ ಗೌಪ್ಯತೆ ಮತ್ತು ಭದ್ರತಾ ಅವಶ್ಯಕತೆಗಳನ್ನು ಹೊಂದಿರುವ ಭಾರತದ ಸಂಸ್ಥೆಗಳು ಈ ಓಎಸ್‌ ಹೊಂದಿರುವ ಫೋನ್‌ಗಳನ್ನು ಬಳಕೆ ಮಾಡಬಹುದು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

https://twitter.com/iit_tirupati/status/1617767036201095169

ಸವಾಲುಗಳೇನು?
ಓಎಸ್‌ ಬಿಡುಗಡೆ ಮಾಡಿದ ಮಾತ್ರಕ್ಕೆ ಅದು ಯಶಸ್ವಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಓಎಸ್‌ ಅಭಿವೃದ್ಧಿ ಮಾಡಬೇಕಾದರೆ ಬಹಳಷ್ಟು ಹಣದ ಹೂಡಿಕೆ ಬೇಕಾಗುತ್ತದೆ. ಈ ಹಿಂದೆ ಸ್ಯಾಮ್‌ಸಂಗ್‌ ಕಂಪನಿ ಬಾಡಾ, ಬ್ಲ್ಯಾಕ್‌ಬೆರಿ ಕಂಪನಿ ಬ್ಲ್ಯಾಕ್‌ಬೆರಿ ಓಎಸ್‌, ನೋಕಿಯಾ ಸಿಂಬಿಯನ್‌, ಮೈಕ್ರೋಸಾಫ್ಟ್‌ ವಿಂಡೋಸ್‌ ಮೊಬೈಲ್‌ ಓಎಸ್‌ ಬಿಡುಗಡೆ ಮಾಡಿತ್ತು. ಮಾರುಕಟ್ಟೆಯ ದೊಡ್ಡ ಕಂಪನಿಗಳೇ ಈ ಓಎಸ್‌ ಬಿಡುಗಡೆ ಮಾಡಿದ್ದರೂ ಅದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. ಮುಖ್ಯವಾಗಿ ಆಪ್‌ ಡೆವಲಪರ್‌ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗುತ್ತದೆ. ಬಳಿಕ ಭದ್ರತೆಗೆ ಸಂಬಂಧಿಸಿದಂತೆ ಅಪ್‌ಡೇಟ್‌ ನೀಡಬೇಕಾಗುತ್ತದೆ. ಆದರೆ BharOS ಹಿಂದೆ ಕೇಂದ್ರ ಸರ್ಕಾರ ನಿಂತಿರುವುದು ವಿಶೇಷ.

ಭಾರತದ ವಿಶ್ವದಲ್ಲೇ ಎರಡನೇ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿದೆ. ಭಾರತದಲ್ಲಿ 120 ಕೋಟಿ ಮೊಬೈಲ್‌ ಬಳಕೆದಾರರಿದ್ದರೆ 60 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದಾರೆ. ಗುಣಮಟ್ಟದ ಉತ್ಪನ್ನ ತಯಾರಾದರೆ ಅದು ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಪಲ್‌ (Apple) ಮತ್ತು ಗೂಗಲ್‌ ಕಂಪನಿಗಳು ಐಓಎಸ್‌ ಮತ್ತು ಆಂಡ್ರಾಯ್ಡ್‌ ಓಎಸ್‌ಗೆ ಬಿಲಿಯನ್‌ಗಟ್ಟಲೇ ಡಾಲರ್‌ ಹಣವನ್ನು ಹೂಡಿಕೆ ಮಾಡಿದ್ದರಿಂದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ಗೂಗಲ್‌ ಕಂಪನಿ ಶುದ್ಧವಾದ ಆಂಡ್ರಾಯ್ಡ್‌ ಓಎಸ್‌ನಲ್ಲೇ ಫೋನ್‌ ಬಿಡುಗಡೆ ಮಾಡಿದರೆ ಉಳಿದ ಫೋನ್‌ ತಯಾರಕ ಕಂಪನಿಗಳು ಕಸ್ಟಮೈಸ್ಡ್‌ ಆವೃತ್ತಿ(ತಮಗೆ ಬೇಕಾದ ವಿಶೇಷತೆಯನ್ನು ಸೇರಿಸುವುದು)  ಫೋನ್‌ ಬಿಡುಗಡೆ ಮಾಡುತ್ತಿರುವ ಕಾರಣ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಫೋನ್‌ಗಳು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button