– ಮಾರಾಟವಾಗ್ತಿವೆ ಅವಧಿ ಮುಗಿದ ನೂಡಲ್ಸ್
ಬೆಂಗಳೂರು: ಪ್ರತಿಯೊಬ್ಬರಿಗೂ ಹೊಟ್ಟೆ ಹಸಿದಾಗ ನೆನಪಾಗುವುದು ಫಟಾಫಟ್ ನೂಡಲ್ಸ್. ಎರಡೇ ಎರಡೂ ನಿಮಿಷದಲ್ಲಿ ರೆಡಿಯಾಗುವ ಈ ನೂಡಲ್ಸ್ ಎಂದರೆ ಮಕ್ಕಳಿಗೆ ತುಂಬ ಇಷ್ಟ. ಬಿಸಿ ಬಿಸಿಯಾದ, ವೆರೈಟಿ ಟೇಸ್ಟಿ ನೂಡಲ್ಸ್ ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಮುನ್ನ ಈ ಸ್ಟೋರಿ ಓದಿ.
ಎರಡು ನಿಮಿಷದಲ್ಲಿ ತಯಾರಾಗುವ ನೂಡಲ್ಸ್ ಗಳು ನಮ್ಮ ದೇಹಕ್ಕೆ ಅಪಾಯಕಾರಿಯಾಗಿದ್ದು, ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್‍ನಲ್ಲಿ ಇದು ಬಯಲಾಗಿದೆ. ಈ ನೂಡಲ್ಸ್ ಆಡಿಕ್ಷನ್‍ನ್ನೇ ಬಳಸಿಕೊಂಡು ಈಗ ಬೆಂಗಳೂರಿನಲ್ಲಿ ಅವಧಿ ಮುಗಿದ ನೂಡಲ್ಸ್ ಅನ್ನು ಮಾರಟ ಮಾಡಲಾಗುತ್ತಿದೆ.
ಸ್ಟಿಂಗ್ ಆಪರೇಷನ್ 1
ಸ್ಥಳ: ಕೆ.ಆರ್ ಮಾರುಕಟ್ಟೆ
ಕೆ.ಆರ್ ಮಾರುಕಟ್ಟೆಯ ರಸ್ತೆ ಬದಿಯಲ್ಲಿರುವ ದಿನಸಿ ಅಂಗಡಿಗಳಲ್ಲಿ ನೂಡಲ್ಸ್ ಅನ್ನು ಗೋಣಿಚೀಲದಲ್ಲಿ ಮಾರಾಟಕ್ಕಿಡಲಾಗಿದೆ. ಅವಧಿ ಮುಗಿದ ಪ್ರತಿಷ್ಠಿತ ಕಂಪೆನಿಗಳ ನೂಡಲ್ಸ್ ಗಳನ್ನು, ಇಲ್ಲಿ ಪ್ಯಾಕೇಟ್ ಕತ್ತರಿಸಿ, ಧೂಳು ಬೀಳುವ ಹಾಗೆ ರಾಶಿ ರಾಶಿ ತುಂಬಿಟ್ಟಿದ್ದಾರೆ. ಸಾಮಾನ್ಯವಾಗಿ 300 ಗ್ರಾಂನ ಒಂದು ನೂಡಲ್ಸ್ ಪ್ಯಾಕೇಟ್‍ಗೆ 40 ರೂ. ಇರುತ್ತೆ. ಆದರೆ ಇದೇ ಕಂಪೆನಿಯ ನೂಡಲ್ಸ್ ಇಲ್ಲಿ ಕೆ.ಜಿಗೆ ಕೇವಲ 40 ರೂ. ಸಿಗುತ್ತಿದೆ.
ಸ್ಟಿಂಗ್ ಆಪರೇಷನ್ 2
ಸ್ಥಳ: ಶಿವಾಜಿನಗರ
ಶಿವಾಜಿನಗರದಲ್ಲೂ ಯಾವುದೇ ಪ್ಯಾಕೆಟ್‍ಗಳಿಲ್ಲದೇ, ಬಿಡಿ ಬಿಡಿಯಾಗಿ ಮಾರಾಟವಾಗಿದೆ. ಅಷ್ಟೇ ಅಲ್ಲದೇ ನೂಡಲ್ಸ್ ಪ್ರಿಪೇರ್ ಮಾಡಲು ಬಳಸುವ ಮಸಾಲಾ ಪ್ಯಾಕೆಟ್‍ನ ಮೇಲೂ ಯಾವುದೇ ರೀತಿಯ ಡೇಟ್‍ಗಳಿಲ್ಲ. ಇವುಗಳನ್ನು ಎಷ್ಟು ವರ್ಷದಿಂದ ಮಾರಲಾಗುತ್ತಿದೆ ಎಂಬ ಸುಳಿವು ಸಹ ಇಲ್ಲ. ಅವಧಿ ಮುಗಿದ ನೂಡಲ್ಸ್ ಗಳನ್ನೇ ಮಾರುತ್ತೇವೆಂದು ಸ್ವತಃ ವ್ಯಾಪಾರಿಗಳೇ ಒಪ್ಪಿಕೊಳ್ಳುತ್ತಾರೆ.
ಪ್ರತಿನಿಧಿ: ಕೊಡೋದು ಹೇಳಿ ಸರ್
ವ್ಯಾಪಾರಿ: ಒಳ್ಳೆಯದು ಬೇಕಾದ್ರೆ ಆಗಲ್ಲ. ಮಿಕ್ಸ್ ಇದೆ, ಮೂಟೆ ಇದೆ ಹಾಗೆ ಎತ್ತಿ ಕೊಡ್ತೇನೆ. ಕೆ.ಜಿಗೆ 35ರೂ
ಪ್ರತಿನಿಧಿ: ಇದು ಏಕ್ಸ್ ಪೈರಿ ಡೇಟ್ ಆಗಿರೋದಾ?
ವ್ಯಾಪಾರಿ: ಹಾ. ಇದು ಡ್ಯಾಮೇಜ್ ಆಗಿರೋದು.
ಪ್ಯಾಕೆಟ್ ಇಲ್ಲದೇ ಬೀದಿ ಬದಿಯಲ್ಲಿ ಬಿಕರಿಯಾಗಿ ನೂಡಲ್ಸ್ ಗಳನ್ನು ಮಾರುವುದೇ ತಪ್ಪು. ಜೊತೆಗೆ ಹೀಗೆ ಸಂಗ್ರಹಿಸಿದ ಮಸಾಲಾ ಬಳಸುವುದೇ ತಪ್ಪು ಎಂದು ಆಹಾರ ತಜ್ಞರು ಹೇಳುತ್ತಾರೆ.
ಕಳಪೆ ಹಾಗೂ ಅವಧಿ ಮುಗಿದ ನೂಡಲ್ಸ್ ಗಳನ್ನ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳು:
* ಅವಧಿ ಮುಗಿದ ನೂಡಲ್ಸ್ ಕ್ರಮೇಣ ವಿಷವಾಗುವುದರಿಂದ ಹೊಟ್ಟೆಗೆ ವಿಷ ಸೇರಲಿದೆ.
* ನೂಡಲ್ಸ್ ನಲ್ಲಿರುವ ಮಸಾಲಾ ರಾಸಾಯನಿಕವಾಗಿ ಬದಲಾಗಿ ನಮ್ಮ ದೇಹ ಸೇರುತ್ತೆ.
* ಮಸಾಲಾದಲ್ಲಿ ಫಂಗಸ್‍ಗಳು ಉತ್ಪತ್ತಿಯಾಗಿ, ಹೊಟ್ಟೆ ನೋವು, ವಾಂತಿ-ಭೇದಿ ಬರಬಹುದು.
ನಮ್ಮ ಕಣ್ಣೇದಿರುಲ್ಲೇ ಅವಧಿ ಮೀರಿದ ಪದಾರ್ಥಗಳು ಮಾರಾಟವಾಗುತ್ತಿದೆ. ಆದರೂ, ಏನೂ ಗೊತ್ತಿಲ್ಲದಂತೆ ಅಧಿಕಾರಿಗಳು ಕಣ್ಮುಚ್ಚಿದ್ದಾರೆ.