ಅವಧಿಗೂ ಮುನ್ನವೇ ಪೂರ್ಣಗೊಳ್ಳಲಿದೆ ಏಷ್ಯಾದ ಉದ್ದ ಸುರಂಗ ರಸ್ತೆ

Public TV
2 Min Read
Zojila Tunnel Nitin Gadkari 4

– 2023  ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ವಿಶ್ವಾಸ
– ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಗಡ್ಕರಿ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಿರ್ಮಾಣವಾಗಲಿರುವ ಏಷ್ಯಾದ ಅತಿ ಉದ್ದದ ದ್ವಿಮುಖ ರಸ್ತೆ ಸುರಂಗ ನಿರ್ಮಾಣ ಕಾಮಗಾರಿ ಅವಧಿಗೆ ಮುನ್ನವೇ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ, ಸಂಪರ್ಕ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Zojila Tunnel Nitin Gadkari 2

14.5 ಕಿ.ಮೀ ಉದ್ದ ಜೊಜಿಲಾ  ಸುರಂಗ ರಸ್ತೆಯನ್ನು ಪರಿಶೀಲಿಸಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಈ ಸುರಂಗ ನಿರ್ಮಾಣದ ಕಾಮಗಾರಿ ಸೆಪ್ಟೆಂಬರ್ 2026ರ ಒಳಗಡೆ ಪೂರ್ಣಗೊಳ್ಳಬೇಕೆಂಬ ಗುರಿಯನ್ನು ಹಾಕಲಾಗಿತ್ತು. ಆದರೆ ನಾನು 2023ರ ಡಿಸೆಂಬರ್ ಒಳಗಡೆ ಪೂರ್ಣಗೊಳಿಸಬೇಕೆಂದು ಕೇಳಿದ್ದೇನೆ. ಇದರಿಂದ 2024 ಗಣರಾಜ್ಯೋತ್ಸವಕ್ಕೆ ಮೊದಲು ಪ್ರಧಾನಿಗಳು ಉದ್ಘಾಟನೆ ಮಾಡಬಹುದು. ಇದು ನನಗೆ ಸವಾಲಿನ ವಿಚಾರವಾಗಿದ್ದರೂ ಆದರೆ ಈ ಕಾಮಗಾರಿಯನ್ನು ಅವಧಿಗೂ ಮೊದಲೇ ಎಂಜಿನಿಯರ್‌ಗಳು ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಗುತ್ತಿಗೆದಾರರಿಗೆ ವೇಗವಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಸುರಂಗ ಜನರ ಸೇವೆಗೆ ಲಭ್ಯವಾಗಬೇಕು. ನಾವು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳುತ್ತೇವೆ ಎಂದು ಇದರ ಅರ್ಥವಲ್ಲ. ಹಿಮಾಲಯದಲ್ಲಿ ಈ ರೀತಿಯದ್ದನ್ನು ನಿರ್ಮಿಸುವುದು ಸುಲಭವಲ್ಲ. ಆದರೆ ಅವರು ಅದನ್ನು ಮಾಡಬಹುದು ಎಂದು ನನಗೆ ಖಾತ್ರಿಯಿದೆ ಎಂದು ಗಡ್ಕರಿ ಹೇಳಿದರು.

Zojila Tunnel Nitin Gadkari 2

ಸುರಂಗ ಯಾಕೆ?
4,600 ಕೋಟಿ ರೂ. ವೆಚ್ಚದ 14.5 ಕಿಮೀ ಉದ್ದದ ಜೊಜಿಲಾ ಸುರಂಗವು ಏಷ್ಯಾದ ಅತಿ ಉದ್ದದ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು 11,500 ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿದೆ. ಇದು ಕಾಶ್ಮೀರ ಮತ್ತು ಲಡಾಖ್ ನಡುವೆ ಎಲ್ಲಾ ಹವಾಮಾನ ಸಮಯದಲ್ಲಿ ದೀರ್ಘಕಾಲಿಕ ಸಂಪರ್ಕವನ್ನು ಒದಗಿಸಲಿದೆ.

ಪ್ರಸ್ತುತ ಶ್ರೀನಗರ ಮತ್ತು ಲೇಹ್ ಮಧ್ಯೆ 5 ತಿಂಗಳ ಕಾಲ ಮಾತ್ರ ರಸ್ತೆ ಸಂಪರ್ಕವಿದೆ. ನವೆಂಬರ್ ನಿಂದ ಏಪ್ರಿಲ್ ವರೆಗೆ ಲೇಹ್ ಸಂಪರ್ಕ ಕಡಿತಗೊಳ್ಳುತ್ತದೆ. ಚಳಿಗಾಲದ ತಿಂಗಳಲ್ಲಿ ಈ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸುತ್ತದೆ. ಹಿಮಪಾತ ಸಂಭವಿಸುವ ಕಾರಣ ಸಂಚಾರವನ್ನು ಬಂದ್ ಮಾಡಲಾಗುತ್ತಿತ್ತು.

Zojila Tunnel Nitin Gadkari 1

ಜನರಿಗೆ ಮಾತ್ರ ಅಲ್ಲದೇ ಭಾರತೀಯ ಸೇನೆಗೂ ಲೇಹ್ ತಲುಪಲು ಕಷ್ಟವಾಗುತ್ತಿತ್ತು. ಸೇನೆ ದೂರದ ಮಾರ್ಗಗಳನ್ನು ಬಳಸಿ ಲೇಹ್ ತಲುಪಬೇಕಿತ್ತು. ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾದ ರಸ್ತೆಗಳು ಇರುವ ಕಾರಣ ಇದು ಕೇಂದ್ರದ ಚಿಂತೆಗೆ ಕಾರಣವಾಗಿತ್ತು. ಈ ಕಾರಣಕ್ಕೆ ಕೇಂದ್ರ ಸರ್ಕಾರ ವರ್ಷದ 365 ದಿನವೂ ಲಡಾಖ್ ಸಂಪರ್ಕಿಸಲು ಜೊಜಿಲಾ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ 

ಈ ಮೊದಲು ಬಾಲ್ತಾನ್‍ನಿಂದ ಮೀನಾ ಮಾರ್ಗಗಳ ನಡುವಿನ ಅಂತರ 40 ಕಿ.ಮೀ ಇದ್ದರೆ ಈಗ ಇದು 14 ಕಿ.ಮೀ ಕಡಿತಗೊಂಡಿದೆ. ಅಂದಾಜಿನ ಪ್ರಕಾರ ಪ್ರಯಾಣದ ಸಮಯವನ್ನು ಪ್ರಸ್ತುತ 3.5 ಗಂಟೆಗಳಿಂದ 15 ನಿಮಿಷಗಳಿಗೆ ಇಳಿಯಲಿದೆ. ಹೈದರಾಬಾದಿನ ಮೆಗಾ ಎಂಜಿನಿಯರಿಂಗ್ ಆಂಡ್ ಇನ್‍ಫ್ರಾಸ್ಟ್ರಕ್ಷರ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಿದೆ.

ಮೂಲಸೌಕರ್ಯಕ್ಕೆ ಒತ್ತು:
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಭಾಗವಾಗಿ ಈ ಜೊಜಿಲಾ ಸುರಂಗ ನಿರ್ಮಾಣಗೊಳ್ಳುತ್ತಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ 20 ಮತ್ತು ಲಡಾಖ್‍ನಲ್ಲಿ 11 ಸುರಂಗ ಯೋಜನೆ ನಿರ್ಮಿಸಲು ಸರ್ಕಾರ ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *