ನವದೆಹಲಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಆರೋಪಿಗಳ ಮನೆ ಸೇರಿದಂತೆ ಇತರೆ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವ ಬುಲ್ಡೋಜರ್ ನ್ಯಾಯದ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದೆ. ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ಪ್ರಕಟಿಸಿ ಎಚ್ಚರಿಕೆ ನೀಡಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಕೆಲವು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಕಟ್ಟಡಗಳ ತೆರವಿಗೆ ಮಾರ್ಗಸೂಚಿ ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ, ಬುಲ್ಡೋಜರ್ ಕಾರ್ಯಚರಣೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತು. ಕಾರ್ಯಾಂಗವು ನ್ಯಾಯಾಂಗವನ್ನು ಅತಿಕ್ರಮಿಸಲು ಸಾಧ್ಯವಿಲ್ಲ, ಆರೋಪಿಯನ್ನು ಅಪರಾಧಿಯನ್ನು ಎಂದು ನಿರ್ಧರಿಸಲು ಅಧಿಕಾರಿಗಳು ನ್ಯಾಯಾಧೀಶರಲ್ಲ. ಆರೋಪಿಯ ತಪ್ಪನ್ನು ಪೂರ್ವಾಗ್ರಹಕ್ಕೆ ಒಳಪಡಿಸಬಾರದು. ಕೇವಲ ಆರೋಪದ ಮೇಲೆ ನಾಗರಿಕರ ಮನೆಯನ್ನು ಅನಿಯಂತ್ರಿತವಾಗಿ ಕೆಡವುವುದು ಅಸಾಂವಿಧಾನಿಕ ಎಂದು ನ್ಯಾ. ಬಿ.ಆರ್ ಗವಾಯಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿ ಹಲವು ಮಾರ್ಗಸೂಚಿ ಪ್ರಕಟಿಸಿದರು. ಇದನ್ನೂ ಓದಿ: ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ
ಮನೆ ಎನ್ನುವುದು ಅದೊಂದು ಕಟ್ಟಡವಲ್ಲ, ಅದೊಂದು ಸರಕ್ಷತೆ, ಭವಿಷ್ಯದ ನಿರೀಕ್ಷೆ. ಒಬ್ಬ ವ್ಯಕ್ತಿ ಮಾತ್ರ ಅಪರಾಧದ ಆರೋಪಿಯಾಗಿದ್ದರೆ ಇಡೀ ಕುಟುಂಬ ಸದಸ್ಯರ ಆಶ್ರಯವನ್ನು ಕಿತ್ತುಕೊಳ್ಳುವುದು ಅಸಾಂವಿಧಾನಿಕ. ಇಂತಹ ಅಧಿಕಾರವನ್ನು ಅಧಿಕಾರಿಗಳಿಗೆ ಹೇಗೆ ನೀಡಲು ಸಾಧ್ಯ. ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಧಿಕಾರಿಗಳನ್ನು ಉಳಿಸಲಾಗುವುದಿಲ್ಲ, ಅದರ ಹೊಣೆಗಾರಿಕೆ ಕ್ರಮಗಳನ್ನು ಎದರುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆಯನ್ನು ನೀಡಿದೆ.
ಮಾರ್ಗಸೂಚಿಯಲ್ಲಿ ಏನಿದೆ?
* ನ್ಯಾಯಯುತವಾದ ವಿಚಾರಣೆಯಿಲ್ಲದೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ.
* ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅನಿಯಂತ್ರಿತ ರೀತಿಯಲ್ಲಿ ವರ್ತಿಸಬಾರದು.
* ಕಟ್ಟಡ ತೆರವಿಗೆ ಮುನ್ನ ಅಂಚೆ ಮೂಲಕ ನೋಟಿಸ್ ನೀಡಬೇಕು. ನೋಟಿಸ್‌ನಲ್ಲಿ ಕಟ್ಟಡ ಹೇಗೆ ಅಕ್ರಮವಾಗಿದೆ? ಯಾವ ನಿಯಮಗಳ ಉಲ್ಲಂಘನೆಯಾಗಿದೆ ಸ್ಪಷ್ಟಪಡಿಸಬೇಕು.
* ಮಾಲೀಕರ ಸ್ಪಷ್ಟನೆ ನೀಡಲು ಅವಕಾಶವನ್ನು ಕಲ್ಪಿಸಬೇಕು.
* ನೋಟಿಸ್‌ಗಳನ್ನು ಟ್ರ್ಯಾಕ್ ಮಾಡಲು ಮೂರು ತಿಂಗಳೊಳಗೆ ಡಿಜಿಟಲ್ ಪೋರ್ಟಲ್ ಸ್ಥಾಪಿಸಬೇಕು.
* ನೋಟಿಸ್ ಬಳಿಕ ಕಟ್ಟಡವನ್ನು ಪೂರ್ಣ ಅಥವಾ ಭಾಗಶಃ ತೆರವು ಮಾಡಬೇಕಾದರೆ ಕಾರಣ ಏನು ಎನ್ನುವ ಬಗ್ಗೆ ಆದೇಶಿಸಬೇಕು.
* ವಿವರವಾದ ಸ್ಪಾಟ್ ವರದಿಯನ್ನು ಸಿದ್ಧಪಡಿಸಬೇಕು, ಕಟ್ಟಡ ತೆರವು ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಹಾಜರಿದ್ದ ಅಧಿಕಾರಿಗಳ ಮತ್ತು ತೆರವಿನ ವಿವರವಾದ ವಿಡಿಯೋವನ್ನು ಚಿತ್ರೀಕರಿಸಬೇಕು. ಸ್ಪಾಟ್ ವರದಿಯನ್ನು ಡಿಜಿಟಲ್ ಪೋರ್ಟಲ್‌ನಲ್ಲಿ ಪ್ರದರ್ಶಿಸಬೇಕು.
* ಈ ನಿರ್ದೇಶನಗಳ ಉಲ್ಲಂಘನೆಯು ನ್ಯಾಯಾಂಗ ನಿಂದನೆ ಅಥವಾ ಇತರ ಕಾನೂನು ಕ್ರಮಕ್ಕೆ ಕಾರಣವಾಗಬಹುದು.
* ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ನಷ್ಟವಾದ ಆಸ್ತಿ ಮರುಪಾವತಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ.
* ಸರ್ಕಾರದ ಆಸ್ತಿ, ರಸ್ತೆ, ಕೆರೆ, ರೈಲು ಮಾರ್ಗಗಳ ಒತ್ತುವರಿಯಾಗಿದ್ದರೆ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ.