-ಅದಮಾರು ಸ್ವಾಮೀಜಿಗಳ ಸಂದರ್ಶನ
ಉಡುಪಿ: ಎಂಜಿನಿಯರಿಂಗ್ ಪದವೀಧರ ಈಶಪ್ರಿಯ ತೀರ್ಥ ಸ್ವಾಮೀಜಿ ಉಡುಪಿ ಕೃಷ್ಣನ ಪೂಜಾಧಿಕಾರ ವಹಿಸಿಕೊಂಡಿದ್ದಾರೆ. ಧಾರ್ಮಿಕವಾಗಿ ಎರಡು ವರ್ಷ ಸಾಕಷ್ಟು ಕರ್ತವ್ಯ ಇದ್ದರೂ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಅದಮಾರು ಕಿರಿಯಶ್ರೀ ನಿರ್ಧರಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆಗೆ ನೂತನ ಪೀಠಾಧಿಪತಿ ಮಾತನಾಡಿದ್ದಾರೆ.
ಸನ್ಯಾಸತ್ವ ಪಡೆದ ಐದೇ ವರ್ಷಕ್ಕೆ ಪರ್ಯಾಯ ಪೀಠ ಸಿಕ್ಕಿದೆ. ಏನನ್ನಿಸುತ್ತಿಗೆ?
ಈಶಪ್ರೀಯ ತೀರ್ಥ ಸ್ವಾಮೀಜಿ: ಇದೊಂದು ದೊಡ್ಡ ಜವಾಬ್ದಾರಿ. ನೋಡಿದಷ್ಟು, ಹೇಳಿದಷ್ಟು ಸುಲಭದ ಮಾತಲ್ಲ. ಹಿಂದಿನಿಂದ ಬಂದ ಸಂಪ್ರದಾಯ ಪಾಲಿಸುತ್ತೇನೆ. ನಾವು ಪೀಠದಲ್ಲಿ ಕೂರುತ್ತಿದ್ದೇವೆ. ಚಾಲಕನಂತೆ. ನೂರಾರು ಸಾವಿರಾರು ಜನರ ಸಹಾಯವಿದೆ. ಪರ್ಯಾಯ ದೇವರ ಆಣತಿಯಂತೆ ನಡೆದುಕೊಂಡು ಹೋಗುತ್ತದೆ.
ಮಾಧ್ವಪೀಠದ ಜವಾಬ್ದಾರಿ ದೊಡ್ಡದು ಅನ್ನಿಸುತ್ತಿಲ್ಲವೇ? ಐದು ವರ್ಷದ ಅನುಭವ ಸಾಕಾ?
ಸ್ವಾಮೀಜಿ: ಗುರುಗಳ ಆಜ್ಞೆಯಂತೆ ಪರ್ಯಾಯ ಪೀಠಾರೋಹಣ ಮಾಡಿದ್ದೇನೆ. ಹಿಂದಿನಿಂದಲೇ ಮಾನಸಿಕವಾಗಿ ಸಿದ್ಧವಾಗಿರಲು ಗುರುಗಳು ಹೇಳಿದ್ದರು. ಪೂರ್ವ ನಿಗದಿತವಾಗಿದೆ. ಅವರ ಮಾರ್ಗದರ್ಶನದಂತೆ ನಡೆದುಕೊಂಡು ಹೋಗುತ್ತೇನೆ.
ಧಾರ್ಮಿಕ ಶ್ರೀಗಳಿಂದ ಸಮಾಜ ಸಾಮಾಜಿಕ ಕಳಕಳಿ, ಕಾರ್ಯಕ್ರಮವನ್ನು ಸಮಾಜ ಬಯಸುತ್ತದೆ. ಎರಡು ವರ್ಷದ ಯೋಜನೆಗಳೇನು?
ಸ್ವಾಮೀಜಿ: ಎರಡು ವರ್ಷದ ಯೋಜನೆ ಅಒಣ ಇಲ್ಲ. ಪರಿಸ್ಥಿತಿಗೆ ಅನುಗುಣವಾಗಿ, ಆ ಕ್ಷಣ ದಿನಕ್ಕೆ ಬೇಕಾದಂತೆ ಮಾಡುತ್ತೇವೆ. ಒಳ್ಳೆಯ ಪ್ರಯತ್ನ ಮಾಡುತ್ತೇವೆ. ಸಮಾಜಕ್ಕೆ ಉತ್ತಮ ಸೇವೆ ಸಿಗಬೇಕು ಎಂಬ ಆಲೋಚನೆ ಇದೆ.
ಪರಿಸರ ಕಾಳಜಿಯ ಜಪ ನಿಮ್ಮಿಂದ ಕೇಳಿಬರುತ್ತಿದೆ. ಎರಡು ವರ್ಷ ಪರಿಸರ ರಕ್ಷಣೆಗೇನು ಮುತುವರ್ಜಿ ವಹಿಸುತ್ತೀರಿ?
ಸ್ವಾಮೀಜಿ: ನೀರು ಮಿತವಾಗಿ ಬಳಸಬೇಕು. ನಮಗೆ ಬೇಕಾದಷ್ಟು ಉಪಯೋಗ ಮಾಡಬೇಕು. ಬಾವಿ ಇದ್ದಾಗ ಮಿತಬಳಕೆ ಇತ್ತು ತೊಟ್ಟು ನೀರೂ ಪೋಲಾಗುತ್ತಿರಲಿಲ್ಲ. ಮಷೀನ್ ಬಂದದ್ದರಿಂದ ನೀರಿನ ಪೋಲು ಜಾಸ್ತಿಯಾಗಿದೆ. ಪ್ಲ್ಯಾಸ್ಟಿಕ್ ಜೀರ್ಣವಾಗಲ್ಲ. ನಮ್ಮ ಪರ್ಯಾಯದಲ್ಲಿ ಕಡಿಮೆ ಬಳಸುತ್ತೇವೆ. ಜನರೂ ಇದನ್ನು ಅನುಸರಿಸಲಿ. ಜನತೆಯ ಬೆಂಬಲ ಬೇಕು. ಇದರ ಮುಂದಾಳತ್ವ ಇದ್ದರೆ ಜನರಿಗೂ ಉತ್ತೇಜನ, ಅವಾರ್ನೆಸ್ ಬರುತ್ತದೆ.
ಶ್ರೀಕೃಷ್ಣನ ಮೊದಲ ಪೂಜೆ, ಎರಡು ವರ್ಷದ ನಿರಂತರ ಪೂಜೆಯಲ್ಲಿ ಆಗ್ರಹವೇನು?
ಸ್ವಾಮೀಜಿ: ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಲ್ಲ. ನಮಗೇನು ಬೇಕು ಎಂದು ದೇವರಿಗೆ ಗೊತ್ತಿದೆ. ಪ್ರಾರ್ಥನೆ ಮಾಡಿದರೆ ಕೊಟ್ಟು ತಗೊಂಡು ಮಾಡುವ ವಿನಿಮಯ ಆಗುತ್ತದೆ. ಎಷ್ಟು ದಿನ ಇರುತ್ತೇವೋ ಅಷ್ಟು ಕಾಲ ಒಳ್ಳೆಯ ರೀತಿಯಲ್ಲಿ ಬದುಕಬೇಕು ಎಂಬೂದು ನಮ್ಮ ಭಾವನೆ. ಕೃಷ್ಣ ಒಳ್ಳೆಯದನ್ನೇ ಮಾಡುತ್ತಾನೆ.