Connect with us

Bengaluru City

ನನ್ನ ಹೆಸ್ರು ಹೇಳಿದ್ರೆ ಬಿಜೆಪಿಗೆ ಮಾರ್ಕೆಟ್ – ಶತಾಬ್ಧಿಯಲ್ಲಿ ಜೈಲಿನ ಅನುಭವ ಹಂಚಿಕೊಂಡ ಡಿಕೆಶಿ

Published

on

– ನೆಲದ ಮೇಲೆಯೇ ಕುಳಿತುಕೊಳ್ಳಬೇಕಿತ್ತು
– ಐಎಎಸ್, ಕೆಎಎಸ್ ಅಧಿಕಾರಿಗಳ ಪತ್ನಿಯರಿಂದ ಪ್ರತಿಭಟನೆ

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶತಾಬ್ಧಿಯಲ್ಲಿ ಜೈಲಿನಲ್ಲಿದ್ದ ದಿನಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಡಿಕೆ ಶಿವಕುಮಾರ್ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿ, ಹಲವು ವಿಚಾರಗಳನ್ನು ಹಂಚಿಕೊಂಡರು.

ನನ್ನ ಆರೋಗ್ಯ ಇನ್ನು ಸುಧಾರಿಸಿಲ್ಲ. ಬೆನ್ನು, ಕಾಲು ನೋವು, ಬಿಪಿ ಎಲ್ಲ ಇದೆ. ನಾನು ಫಿಟ್ ಆಗಿದ್ದೆ, ಆದರೆ ಜೈಲಿನ ಕೆಲವು ದಿನಚರಿ ನನ್ನ ಆರೋಗ್ಯ ಹಾಳುಮಾಡಿದೆ. ಜೈಲಲ್ಲಿ ನನಗೆ ಕುಳಿತುಕೊಳ್ಳಲು ಒಂದು ಕುರ್ಚಿ ಸಹ ಕೊಡಲಿಲ್ಲ. ಒಂದು ಟಿವಿಯು ಕೊಡಲಿಲ್ಲ ಅಷ್ಟರ ಮಟ್ಟಿಗೆ ನನ್ನನ್ನು ನಡೆಸಿಕೊಂಡರು. ಆ ವಿಚಾರವಾಗಿ ನೋವಿದ್ದು, ಸಮಯ ಬಂದಾಗ ಎಲ್ಲಾ ಮಾತನಾಡುತ್ತೇನೆ.

ಜೈಲು ಮಂತ್ರಿ ಆಗಿದ್ದಾಗ ನಾನೇ ಜೈಲುಗಳಿಗೆ ಮೊದಲು ಟಿವಿ ಕೊಟ್ಟಿದ್ದೆ ಎಂಬ ವಿಷಯ ನ್ಯಾಯಾಧೀಶರಿಗೆ ಹೇಳಿದೆ. ವಿಷಯ ತಿಳಿದ ಕೂಡಲೇ ನ್ಯಾಯಾಧೀಶರು ಕುರ್ಚಿ ಮತ್ತು ಟಿವಿ ಕೊಡಲು ಹೇಳಿದರು. ಜಡ್ಜ್ ಹೇಳಿದರೂ ಟಿವಿ ಕೊಡಲಿಲ್ಲ. ಕೊನೆಯ ದಿನ ಒಂದು ಕುರ್ಚಿ ನೀಡಿದರು. ನಾನು ನೆಲದ ಮೇಲೆಯೇ ಕುಳಿತುಕೊಳ್ಳಬೇಕಿತ್ತು. ಕುರ್ಚಿ ನೀಡದೇ ಇದ್ದಿದ್ದರಿಂದ ನೆಲದ ಮೇಲೆಯೇ ಕುಳಿತುಕೊಳ್ಳಬೇಕಿತ್ತು.

ನನ್ನ ವಿರುದ್ಧ ಯಾರು ದೂರು ನೀಡಿದ್ರು, ಯಾರು ಪತ್ರ ಬರೆದರು ಎಲ್ಲವೂ ಗೊತ್ತು. ಅಧಿಕಾರಿಗಳು ಎಲ್ಲಾ ಪತ್ರ ತೋರಿಸಿದ್ದಾರೆ. ಸಮಯ ಬಂದಾಗ ಎಲ್ಲವನ್ನು ಹೇಳುತ್ತೇನೆ. ನನ್ನೊಂದಿಗೆ ಏನು ನಡೆಯಿತು ಎಂಬುವುದು ಸಮಾಜಕ್ಕೆ ಗೊತ್ತಾಗಬೇಕಿದೆ. ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ನಲ್ಲೂ ನಾನೇನು ಒತ್ತಾಯ ಮಾಡಿರಲಿಲ್ಲ ಯಾವಾಗಲೋ ಅದರ ಮಾಲೀಕ ಕೊಟ್ಟಿದ್ದ ಅರ್ಜಿ ಅದು ವಿಚಾರಣೆಗೆ ಬಂದಿದೆ.

ಈ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ. ಆದರೆ ಸಿಬಿಐ ನವರು ದಡ್ಡರಲ್ಲ, ಎಲ್ಲವನ್ನು ನೋಡಿಕೊಂಡು ಬರ್ತಾರೆ. ಅಲ್ಲಿ ಏನಿದೆ, ಏನಿಲ್ಲ ನೋಡಿ ಮುಂದವರಿಯುತ್ತಾರೆ ಜಾರಿ ನಿರ್ದೇಶನಾಲಯ ರೀತಿಯಲ್ಲಿ ಸಿಬಿಐ ಕೆಲಸ ಮಾಡಲ್ಲ. ನನ್ನ ಬಗ್ಗೆ ಜನ ತೋರಿಸಿದ ಅಭಿಮಾನಕ್ಕೆ ನಾನು ಋಣಿ. ಐಎಎಸ್ ಆಫಿಸರ್ಸ್ ಪತ್ನಿಯರು, ಐಪಿಎಸ್ ಅಧಿಕಾರಿಗಳ ಹೆಂಡತಿಯರು, ಕೆಎಎಸ್ ಆಫಿಸರ್ ಗಳ ಹೆಂಡತಿಯರು ನನ್ನ ಪರವಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡಿರುವ ವಿಡಿಯೋ ನೋಡಿದ್ದೇನೆ.

ಸಾಕಷ್ಟು ವಿಷಯಗಳು ಮಾತನಾಡುವುದಿದೆ. ಈ ಎಲ್ಲಾ ಸಮಸ್ಯೆ ಮುಗಿದ ಮೇಲೆ ಮಾತನಾಡುತ್ತೇನೆ. ನನ್ನ ಬಗ್ಗೆ ಯಾರು ಏನು ಮಾತನಾಡಿದ್ದಾರೆ ಎಲ್ಲಾ ಗೊತ್ತಿದೆ. ಅದರ ಬಗ್ಗೆ ನಾನು ರಿಯಾಕ್ಟ್ ಮಾಡಿಲ್ಲ. ನನ್ನ ವಿರುದ್ಧ ಕುಮಾರಸ್ವಾಮಿಯವರು ಮಾತನಾಡಿದ್ದಾರೆ ಅನ್ನೋದಕ್ಕೆ ನಾನು ಪ್ರತಿಕ್ರಿಯಿಸಲ್ಲ. ನಾನು ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಬದಲಾದ ಸನ್ನಿವೇಶದಲ್ಲಿ ರಾಜಕೀಯವಾಗಿ ವಿರೋಧಿಯಾಗಿದ್ದ ಕುಮಾರಸ್ವಾಮಿ ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಎಸ್.ಎಂ.ಕೃಷ್ಣ, ಬಂಗಾರಪ್ಪ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಮ್ಮ ನಾಯಕರೆಂದು ಒಪ್ಪಿಕೊಂಡು ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಅವರ ಯಾರ ವಿರುದ್ಧವೂ ಕಮೆಂಟ್ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ತಪ್ಪು ಮಾಡಿದ್ದೇನೋ ಇಲ್ಲವೋ, ಎಲ್ಲವೂ ಕಾನೂನು ಮೂಲಕ ಗೊತ್ತಾಗಲಿದೆ. ಕೆಲವರಿಗೆ ನಾನು ಅನಾವಶ್ಯಕ ಟಾರ್ಗೆಟ್ ಆಗಿದ್ದೇನೆ. ನನ್ನ ಮನಸ್ಸು ಒಪ್ಪಿದ ಕೆಲಸವನ್ನ ಮಾಡುತ್ತೇನೆ. ಯಾರು ಏನು ಅಂದುಕೊಳ್ಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ. ಉಪ ಚುನಾವಣೆ ಟಿಕೆಟ್ ಹಂಚಿಕೆ ಹಾಗೂ ಇತ್ತೀಚಿನ ಬೆಳವಣಿಗೆ ಬಗ್ಗೆ ಸಾಕಷ್ಡು ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಅದನ್ನ ನಾನು ಬಹಿರಂಗ ಪಡಿಸಲ್ಲ.

Click to comment

Leave a Reply

Your email address will not be published. Required fields are marked *