– ಕೆಟ್ಟ ಗಳಿಗೆಯಲ್ಲಿ ಡಿಕೆಶಿ, ನನ್ನ ಸ್ನೇಹ ಹಾಳಾಯ್ತು
– ತೋಳ ಬಂತು ತೋಳ ಅಂದವ್ರು ಗಾಳಿಯಲ್ಲಿ ಬಂದವ್ರು
– ಸಿದ್ದು, ಖರ್ಗೆಗೆ ಕ್ಷಮೆ ಕೇಳಿದ ಸಾಹುಕಾರ
ಮುಂಬೈ: ಸುಪ್ರೀಂಕೋರ್ಟ್ ಆದೇಶ ಮುಂಬೈನಲ್ಲಿರುವ ಶಾಸಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ನ್ಯಾಯಾಲಯದ ಆದೇಶದಂತೆ ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗಲು ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ. ಪ್ರಯಾಣಕ್ಕೂ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ ಹಲವು ವಿಚಾರಗಳನ್ನು ಹೊರ ಹಾಕಿದ್ದಾರೆ.
Advertisement
ಇಂದು ಸುಪ್ರೀಂಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಎಲ್ಲರೊಂದಿಗೆ ಚರ್ಚಿಸಿ ಬೆಂಗಳೂರಿನತ್ತ ಬರುವತ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಳೆದ 8 ರಿಂದ 10 ತಿಂಗಳ ರಾಜಕೀಯ ಬೆಳವಣಿಗೆ ಎಲ್ಲರೂ ತಲೆತಗ್ಗಿಸುವಂತಾಗಿದೆ. ಹಾಗಾಗಿ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ. ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ನಾನಿನ್ನು ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.
Advertisement
Advertisement
ಸಾಹುಕಾರ ಕ್ಷಮೆ:
ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಆಶೀರ್ವಾದದಿಂದ ನಾನು ರಾಜಕೀಯದಲ್ಲಿ ಬೆಳೆದಿದ್ದೇನೆ. ಕೆಲವು ದಿನಗಳ ನನ್ನ ನಡೆಯಿಂದ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಶಾಸಕ ಸುಧಾಕರ್ ಜೊತೆಗೆ ಪಕ್ಷದ ಮುಖಂಡರು, ಅಧ್ಯಕ್ಷರು ನಡೆದುಕೊಂಡು ರೀತಿ ಸರಿಯಲ್ಲ. ಈ ರೀತಿಯ ಘಟನೆಗಳು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮರುಕಳಿಸದಿರಲಿ ಎಂಬುವುದೇ ನನ್ನ ಆಸೆ. ವಿಧಾನಸೌಧದ ಮುಂಭಾಗದಲ್ಲಿ ಸಚಿವ ಯು.ಟಿ.ಖಾದರ್ ಜೊತೆಗೆ ಶಾಸಕ ರೇಣುಕಾಚಾರ್ಯ ನಡೆದುಕೊಂಡ ರೀತಿಯೂ ತಪ್ಪು ಎಂದರು.
Advertisement
ಸುಪ್ರೀಂ ಆದೇಶದ ಮೇರೆಗೆ ಸ್ಪೀಕರ್ ಮುಂದೆ ಹಾಜರಾಗಿ ಮತ್ತೊಮ್ಮೆ ರಾಜೀನಾಮೆಯನ್ನು ಸಲ್ಲಿಸುತ್ತೇನೆ. ಸ್ಪೀಕರ್ ಸಲಹೆಯಂತೆ ರಾಜೀನಾಮೆಯನ್ನು ಕ್ರಮಬದ್ಧವಾಗಿ ನೀಡುತ್ತೇವೆ. ಶೀಘ್ರದಲ್ಲಿಯೇ ಸ್ಪೀಕರ್ ರಾಜೀನಾಮೆ ಅಂಗೀಕರಿಸಿ ನಮ್ಮನ್ನು ಈ ಎಲ್ಲ ಗೊಂದಲಗಳಿಂದ ಮುಕ್ತರನ್ನಾಗಿ ಮಾಡಬೇಕೆಂದು ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು.
ದೇವರು ಮತ್ತು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಇಲ್ಲಿಯವರೆಗೂ ಬಂದಿದ್ದೇವೆ. ಕೆಲವರು ನನ್ನನ್ನು ತೋಳ ಬಂತು ತೋಳ, ಏಕಾಂಗಿ, ಜೋಕರ್ ಅಂತಾ ಕರೆದವರಿಗೆ ದೇವರು ಒಳ್ಳೆಯದು ಮಾಡಲಿ. ಏನೇ ಕಷ್ಟಗಳಿದ್ದರೂ ದೇವರು ನನಗೆ ನೀಡಲಿ. ರಾಜಕಾರಣದಲ್ಲಿ ನನಗಾದ ಸ್ಥಿತಿ ನನ್ನ ವೈರಿಗೂ ಬರೋದು ಬೇಡ ಎಂದು ರಮೇಶ್ ಜಾರಕಿಹೊಳಿ ದೇವರಲ್ಲಿ ಪ್ರಾರ್ಥಿಸಿಕೊಂಡರು.
ಇಬ್ಬರದ್ದೂ ಭಿನ್ನ ನಿಲುವು:
ಸಚಿವ ಡಿ.ಕೆ.ಶಿವಕುಮಾರ್ ನನ್ನ ಆಪ್ತ ಮಿತ್ರರಲ್ಲಿ ಒಬ್ಬರು. ಒಂದು ಕೆಟ್ಟ ಗಳಿಗೆಯಲ್ಲಿ ಇಬ್ಬರ ಸ್ನೇಹ ಹಾಳಾಗಿದೆ. ಬೆಳಗ್ಗೆ ಮಾಧ್ಯಮಗಳಲ್ಲಿ ಡಿ.ಕೆ.ಶಿವಕುಮಾರ್ ಅವರ ಸ್ಥಿತಿ ನೋಡಿ ಮನಸ್ಸಿಗೆ ತುಂಬಾನೇ ಬೇಜಾರು ಆಯ್ತು. ಶಿವಕುಮಾರ್ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಬಯಸುತ್ತೇನೆ. ಈ ಹಿಂದೆ ಕಷ್ಟದಲ್ಲಿ ಡಿ.ಕೆ.ಶಿವಕುಮಾರ್ ನನ್ನ ಬೆನ್ನಿಗೆ ನಿಂತಿದ್ದನ್ನು ಮರೆತಿಲ್ಲ ಮತ್ತು ಮರೆಯುವದಿಲ್ಲ. ರಾಜಕಾರಣದಲ್ಲಿ ಇಬ್ಬರ ನಿಲುವುಗಳು ಭಿನ್ನವಾಗಿವೆ. ಆದ್ರೆ ಇಂದಿಗೂ ವೈಯಕ್ತಿಕವಾಗಿ ನಾವಿಬ್ಬರೂ ಒಳ್ಳೆಯ ಮಿತ್ರರು. ಒಂದು ವೇಳೆ ಶಿವಕುಮಾರ್ ವೈಯಕ್ತಿಕ ಜೀವನದಲ್ಲಿ ಕಷ್ಟ ಬಂದ್ರೆ ನಾನು ಸಾಥ್ ಕೊಡುತ್ತೇನೆ ಎಂದು ತಿಳಿಸಿದರು.
ದೇವರೇ ಶಿಕ್ಷೆ ನೀಡ್ತಾನೆ:
ತೋಳ ಬಂತು ತೋಳ ಎಂದು ಹೇಳಿದವರಿಗೆ ತಾವಿರುವ ಹುದ್ದೆ ಮತ್ತು ಘನತೆ ಬಗ್ಗೆ ಗೊತ್ತಿಲ್ಲ. ಏನೋ ಗಾಳಿಯಲ್ಲಿ ಬಂದು ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಅಧಿಕಾರದ ದರ್ಪದಿಂದ ಆ ರೀತಿಯ ಮಾತುಗಳನ್ನಾಡಿದರು. ಲೋಕಸಭಾ ಚುನಾವಣೆಯಲ್ಲಿ ಜನ ಈಗಾಗಲೇ ಉತ್ತರ ನೀಡಿದ್ದು, ಮುಂದೆಯೂ ನೀಡುತ್ತಾರೆ. ನಾನೇನು ಅವರಿಗೆ ಕೆಟ್ಟದಾಗಲಿ ಎಂದು ಬಯಸಲ್ಲ. ಮುಂದಿನ ದಿನಗಳಲ್ಲಿ ದೇವರೇ ಶಿಕ್ಷೆ ನೀಡುತ್ತಾನೆ. ಟೀಕೆ ಮಾಡಿದವರಿಗೆ ಒಳ್ಳೆಯದನ್ನೇ ಮಾಡಲಿ ಎಂದು ಬಯಸುತ್ತೇನೆ. ಸುಪ್ರೀಂ ಕೋರ್ಟ್ ಆದೇಶದಿಂದ ನಮಗೆ ಗೆಲುವು ಸಿಕ್ಕಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಬಳಸದೇ ಪರೋಕ್ಷವಾಗಿ ಮಾತಿನಲ್ಲೇ ಚಾಟಿ ಬೀಸಿದರು.