– ಜುಲೈ 26 ಬಿಜೆಪಿಗೆ ಬಿಗ್ ಡೇ!
ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾದ ಎರಡನೇ ವರ್ಷದ ದಿನದಂದೇ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಜುಲೈ 26ರಂದು ರಾಜ್ಯಪಾಲರನ್ನು ಸಿಎಂ ಯಡಿಯೂರಪ್ಪ ಭೇಟಿ ಆಗಲಿದ್ದು, ಅವತ್ತೇ ತಾಂತ್ರಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಅದೇ ದಿನದಂದು ಅಧಿಕಾರಿಗಳು, ಶಾಸಕರ ಜೊತೆ ಫೋಟೋ ಸೆಷನ್ ಗೂ ಈಗಾಗಲೇ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಂದೇ ಅಧಿಕೃತವಾಗಿ ರಾಜೀನಾಮೆ ನೀಡಿ, ಆಗಸ್ಟ್ ಮೊದಲ ವಾರದವರೆಗೂ ಆಕ್ಟಿಂಗ್ ಸಿಎಂ ಆಗಿ ಮುಂದುವರಿಯುವ ಸಾಧ್ಯತೆಗಳಿವೆ. ಎರಡನೇ ವರ್ಷದ ಸಂಭ್ರಮದ ದಿನದಂದೇ ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ಸೂಚನೆ ನೀಡಿರುವ ಬಗ್ಗೆ ತಿಳಿದು ಬಂದಿದೆ.
ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಸಹ ಯಡಿಯೂರಪ್ಪನವರ ರಾಜೀನಾಮೆ ಫಿಕ್ಸ್ ಎಂದು ಹೇಳಿತ್ತು. ರಾಜೀನಾಮೆ ಪ್ರಕ್ರಿಯೆ ಆರಂಭವಾಗಿರುವ ಕುರಿತ ಮಾತುಗಳು ಆಡಿಯೋದಲ್ಲಿವೆ. ಮುಂದಿನ ಸಿಎಂ ಯಾರು ಆಗ್ತಾರೆ ಅನ್ನೋದರ ಬಗ್ಗೆ ಕೆಲ ಹೆಸರುಗಳು ಮುನ್ನಲೆಗೆ ಬಂದಿವೆ. ಈ ಲಿಸ್ಟ್ ನಲ್ಲಿಯೇ ಮೂವರ ಹೆಸರುಗಳು ಅಂತಿಮೆ ಆಗಿವೆ ಅಂತಾನೂ ಚರ್ಚೆಗಳು ಕಮಲ ಪಡಸಾಲೆಯಲ್ಲಿ ನಡೆಯುತ್ತಿವೆ.
ಸಿಎಂ ಸ್ಥಾನಕ್ಕೆ ಇವರೇನಾ..?
1. ಪ್ರಹ್ಲಾದ್ ಜೋಶಿ, ಕೇಂದ್ರ ಮಂತ್ರಿ, ಹುಬ್ಬಳ್ಳಿ-ಧಾರವಾಡ ಸಂಸದ
2. ಅರವಿಂದ್ ಬೆಲ್ಲದ್, ಶಾಸಕ, ಹುಬ್ಬಳ್ಳಿ-ಧಾರವಾಡ ಪಶ್ಚಿಮ
3. ಮುರುಗೇಶ್ ನಿರಾಣಿ, ಸಚಿವ, ಬೀಳಗಿ ಶಾಸಕ
4. ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ
5. ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ, ಮಲ್ಲೇಶ್ವರಂ ಶಾಸಕ
6. ಬಸನಗೌಡಪಾಟೀಲ್ ಯತ್ನಾಳ್, ವಿಜಯಪುರ ನಗರ ಶಾಸಕ
ಆಡಿಯೋದಲ್ಲಿ ಏನಿದೆ?:
ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ. ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಚಾನ್ಸ್ ಇದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ.
ಸಿಎಂ ಬದಲಾವಣೆ ಜೊತೆಗೆ ಸಂಪುಟ ಪುನಾರಚನೆ ಆಗಲಿದ್ದು, ಹಿರಿಯ ಸಚಿವರಿಗೆ ಕೊಕ್ ನೀಡಲಾಗುತ್ತೆ. ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ ಸಂಪುಟದಿಂದ ಕೈ ಬಿಡುವ ಸುಳಿವನ್ನು ಆಡಿಯೋ ನೀಡಿದೆ.