-ಕೇಂದ್ರ ಸಚಿವರಿಗೆ ಅಡಿಕೆ ಬೆಳಗಾರರ ಸಮಸ್ಯೆ ಬಗ್ಗೆ ಚರ್ಚೆ, ಪರಿಹಾರಕ್ಕೆ ಒತ್ತಾಯ
ನವದೆಹಲಿ: ಅಡಿಕೆ ಬೆಳೆಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರ ಇಡಬೇಕು ಮತ್ತು ಹಳದಿ ಎಲೆ ರೋಗ ಬಂದ ಭೂಮಿಗೆ ಕೇಂದ್ರ ಸರ್ಕಾರ ಒಮ್ಮೆ ನೀಡಬಹುದಾದ ಪರಿಹಾರ ನೀಡಬೇಕು ಎಂದು ರಾಜ್ಯ ಸಂಸದರ ನಿಯೋಗ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾನ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಮಾಡಿದೆ.
ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ದೃಷ್ಠಿಯಿಂದ ಗುರುವಾರ (ಆ.21) ರಾಜ್ಯ ಸಂಸದರ ನಿಯೋಗ ಕೇಂದ್ರ ಸಚಿವರ ಭೇಟಿಯಾಗಿ ಚರ್ಚಿಸಿದೆ. ಭೇಟಿ ವೇಳೆ ಕರ್ನಾಟಕ ಸೇರಿ ದೇಶದ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.ಇದನ್ನೂ ಓದಿ: ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ
ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗೆಡೆ ಕಾಗೇರಿ, WHOದಿಂದ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್‌ಗೆ ಕಾರಣ ಆಗುತ್ತದೆ ಎಂದು ಹೇಳಿದೆ. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ಕೇಂದ್ರಕ್ಕೆ ವರದಿ ಕೇಳಿದೆ. ವರದಿ ವಿಳಂಬವಾಗುತ್ತಿರುವ ಹಿನ್ನಲೆ ಕೇಂದ್ರ ಸರ್ಕಾರದ ಅಧ್ಯಯನ ವರದಿ ಶೀಘ್ರ ಕೋರ್ಟ್‌ಗೆ ಸಲ್ಲಿಸಬೇಕು ಮತ್ತು ಅಧ್ಯಯನ ಮಾಡುತ್ತಿರುವ ಉನ್ನತ ಸಮಿತಿ ಜೊತೆಗೆ ಒಂದು ಸಭೆ ಏರ್ಪಡಿಸಲು ಮನವಿ ಮಾಡಿದ್ದೇವೆ ಎಂದರು.
ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗದ ಬಗ್ಗೆಯೂ ಚರ್ಚೆಯಾಗಿದೆ. ಹಳದಿ ಎಲೆ ರೋಗ ಬಂದರೆ ಆ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆಯಲು ಸಾಧ್ಯವಿಲ್ಲ. ಇಂತಹ ಪ್ರದೇಶ ಗುರುತಿಸಿ ಅದಕ್ಕೆ ಪರಿಹಾರ ಹೇಗೆ ನೀಡಬೇಕು ಹಾಗೂ ಹಳದಿ ಎಲೆ ರೋಗಕ್ಕೆ ಔಷಧಿ ಬೇಕಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇಳಿಕೊಂಡಿದ್ದೇವೆ. ಈ ಬಗ್ಗೆ ಶಿವರಾಜ್ ಸಿಂಗ್ ಚೌಹಾನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.
ನಿರ್ಮಲಾ ಸೀತರಾಮನ್ ಜೊತೆಗೆ ಸಭೆ ನಡೆಸಿ ವಿದೇಶದಿಂದ ಬರುವ ಅಡಿಕೆ ಬಗ್ಗೆ ಚರ್ಚಿಸಿದೆ, ಕಳ್ಳ ಮಾರ್ಗದಲ್ಲಿ ಅಡಿಕೆ ಬಾರದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ. ಅಡಿಕೆಗೆ 11% ತೇವಾಂಶ ಇದ್ದೇ ಇರುತ್ತೆ, ನಿಯಮಗಳ ಪ್ರಕಾರ ಅದು ಅದು 7% ಇರಬೇಕು ಎಂದಿದೆ. ಆದರೆ ಇದು ನೈಸರ್ಗಿಕವಾಗಿ ಸಾಧ್ಯವಿಲ್ಲ. ಹೀಗಾಗಿ ತೇವಾಂಶದ ಪ್ರಮಾಣ 11% ಹೆಚ್ಚಿಸಿ, 7% ನೀಡುವ ಬೆಲೆಯನ್ನು 11% ತೇವಾಂಶ ಇರುವ ಅಡಿಕೆ ನೀಡಬೇಕು ಎಂದು ಕೇಳಿದೆ.ಇದನ್ನೂ ಓದಿ: ಕನ್ನಡಕ್ಕೆ ಅಜಯ್ ದೇವಗನ್ – ಜೆಪಿ ತುಮಿನಾಡ್ ಸಿನಿಮಾದಲ್ಲಿ ಅಭಿನಯ!
ಅಡಿಕೆ ಸೈಜ್‌ನಿಂದ ದರದಲ್ಲಿ ವ್ಯತ್ಯಾಸವಾಗುತ್ತಿದೆ. ಇದು ಆಗಬಾರದು ಎಂದು ಮನವಿ ಮಾಡಿದೆ, ಅಡಿಕೆಗೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಸದ್ಯ 5% ಜಿಎಸ್‌ಟಿ ಇದೆ, ಇದನ್ನು ಕಡಿಮೆ ಮಾಡಿ ಅಥವಾ ತೆರವು ಮಾಡಲು ಮನವಿ ಮಾಡಿದೆ. ಅಡಿಕೆ ಕುಯ್ಲಿಗೆ ಕಾರ್ಮಿಕರ ಸಮಸ್ಯೆಯಾಗಿದೆ. ಅದಕ್ಕೆ ಫೈಬರ್ ದೋಟಿಗೆ ಬೇಡಿಕೆ ಹೆಚ್ಚಿದೆ. ಆದರೆ ಇದು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದ್ದು, ಇದಕ್ಕೆ 48% ಕಸ್ಟಮ್ಸ್ ಇದೆ. ಅದನ್ನು ಕಡಿಮೆ ಮಾಡಲು ಮನವಿ ಮಾಡಿದೆ, ಅಡಿಕೆ ಕೊಳೆ ರೋಗಕ್ಕೆ ಬಳಕೆಯಾಗುವ ಕಾಪರ್ ಸಲ್ಫೇಟ್‌ಗೆ 18% ಜಿಎಸ್‌ಟಿ ಇದೆ .ಅದನ್ನು 5% ಇಳಿಕೆಗೆ ಕೇಳಿದೆ, ಅಡಿಕೆ ಬೆಳೆಗಾರರಿಗೆ ಬ್ಯಾಂಕುಗಳಲ್ಲಿ ಇರುವ ಸಾಲ ಸೌಲಭ್ಯ ಹೆಚ್ಚಿಸಬೇಕು ಮತ್ತು ಕಡಿಮೆ ಬಡ್ಡಿ ವಿಧಿಸಲು ಮನವಿ ಮಾಡಿದೆ.
ಅಡಿಕೆ ಹಾಳೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ, ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕು, ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಿಂದ ಅಡಿಕೆ ಬೆಳೆಗಾರರಿಗೆ ಅನುಕೂಲ ಆಗುತ್ತಿದೆ. ಪರಿಹಾರ ನೀಡಲು ಮಳೆ ಮಾಪನ ಯಂತ್ರಗಳು ಆಧಾರಿಸಲಾಗುತ್ತದೆ. ಇದು ಪ್ರತಿ ಪಂಚಾಯತ್‌ನಲ್ಲಿರುತ್ತವೆ, ಆದರೆ ರಾಜ್ಯದಲ್ಲಿ 130 ಯಂತ್ರಗಳು ಕೆಟ್ಟು ನಿಂತಿವೆ, ಅದನ್ನು ಸರಿಪಡಿಸಲು, ಮೇಲ್ವಿಚಾರಣೆ ಮಾಡಲು ಮನವಿ ಮಾಡಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ, ಕಳೆದ ಇಪ್ಪತ್ತು ವರ್ಷಗಳಿಂದ ದೆಹಲಿಗೆ ಬರುತ್ತಿದ್ದೇವೆ, ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಹಂತ ಹಂತವಾಗಿ ನಿಭಾಯಿಸುತ್ತಿದ್ದೇವೆ, ಯಾವ ಬೆಳೆಗೂ ಸಂಘಟಿತ ಹೋರಾಟ ಇಲ್ಲ, ನಾವು ಅಡಿಕೆಗೆ ಹೋರಾಟ ಮಾಡುತ್ತಿದ್ದೇವೆ, ವಿದೇಶಿ ಅಡಿಕೆಯನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡಿದೆ, ಇದು ಇನ್ನಷ್ಟು ಹೆಚ್ಚಿಸಬೇಕು, ನ್ಯಾಯಲಯದಲ್ಲೂ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತಂದಿದೆ, ಸದ್ಯ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಪೂರಕ ಕೆಲಸಗಳು ಆಗುವ ಭರವಸೆ ಇದೆ ಎಂದರು. ನಿಯೋಗದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಸಂಸದರಾದ ಬಿವೈ ರಾಘವೇಂದ್ರ, ಗೋವಿಂದ್ ಕಾರಜೋಳ, ಬ್ರಿಜೇಶ್ ಚೌಟಾ, ಪ್ರಭಾ ಮಲ್ಲಿಕಾರ್ಜುನ್ ಸೇರಿ ಇನ್ನಿತರಿದ್ದರು. ಇದೇ ವೇಳೆ ಕ್ಯಾಂಪ್ಕೊದ ಅಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್