ಶಿವಮೊಗ್ಗ: ಮಲೆನಾಡಿನ ಹಲವು ಭಾಗಗಳಲ್ಲಿ ಬೆಳೆಗಳ ನಡುವೆ ವ್ಯಾಪಕವಾಗಿ ಗಾಂಜಾ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಗಾಂಜಾ ಬೆಳೆಯನ್ನು ಪತ್ತೆಹಚ್ಚಲು ಅಬಕಾರಿ ಇಲಾಖೆಯ ಅಧಿಕಾರಿಗಳು ಡ್ರೋನ್ ಕ್ಯಾಮೆರಾದ ಮೊರೆ ಹೋಗಿದ್ದಾರೆ.
ಜಿಲ್ಲೆಯ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಗಾಂಜಾ ಬೆಳೆಯಲಾಗುತ್ತಿದ್ದು, ಜೋಳ, ಚೆಂಡು ಹೂ ಇತ್ಯಾದಿ ಬೆಳೆಗಳ ನಡುವೆ ಬೆಳೆದ ಈ ಗಿಡಗಳನ್ನು ಪತ್ತೆ ಹಚ್ಚುವುದು ಕಷ್ಟಕರಾಗಿದೆ. ಅಲ್ಲದೇ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳ ಹಿನ್ನೀರು ಹಾಗೂ ಕಾಡಿನಲ್ಲೂ ಸಹ ಗಾಂಜಾ ಬೆಳೆಯಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಬೆಳೆಗಳ ನಡುವೆ ಕದ್ದು ಬೆಳೆಯುವ ಗಾಂಜಾ ಗಿಡ ಪತ್ತೆ ಹಚ್ಚಲು ಡ್ರೋನ್ ಕ್ಯಾಮೆರಾದ ಮೊರೆ ಹೋಗಿದ್ದಾರೆ.
Advertisement
Advertisement
ಈ ಕುರಿತು ಅಬಕಾರಿ ಇಲಾಖೆಯ ಸಹಾಯಕ ಸೂಪರಿಂಡೆಂಟ್ ಆದ ಮೋಹನ್ ರವರು ಮಾತನಾಡಿ, ಬೆಳೆಗಳ ನಡುವೆ ಬೆಳೆದ ಗಾಂಜಾ ಬೆಳೆಗಳನ್ನು ಪತ್ತೆಹಚ್ಚುವುದು ತುಂಬಾ ಕಷ್ಟ, ಈ ಹಿನ್ನೆಲೆಯಲ್ಲಿ ನಾವು ಡ್ರೋನ್ ಕ್ಯಾಮೆರಾದ ಮೊರೆಹೋಗಿದ್ದು, ಇದು ರಾಜ್ಯದಲ್ಲಿಯೇ ವಿನೂತನ ಪ್ರಯತ್ನವಾಗಿದೆ. ಈ ಯೋಜನೆ ಸಫಲವಾಗುವ ನಿರೀಕ್ಷೆಯಿದೆ. ಈಗಾಗಲೇ ಡ್ರೋನ್ ಮೂಲಕ ಗಾಂಜಾ ಪತ್ತೆ ಹಚ್ಚುವ ಕಾರ್ಯ ನಡೆದಿದ್ದು, ಇಂದು ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯಲ್ಲಿ ಸುಮಾರು 8-10 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಲಾಗಿದೆ ಎಂದರು.
Advertisement
ಜಿಲ್ಲೆಯ ಇನ್ನಿತರೆ ತಾಲೂಕುಗಳಲ್ಲೂ ಸಹ ಡ್ರೋನ್ ಮೂಲಕ ಪರಿಶೀಲನೆ ಮಾಡಲು ಸಿದ್ದರಾಗಿದ್ದೇವೆ. ಅಲ್ಲದೇ ಕಳೆದ ವರ್ಷ ಜಿಲ್ಲೆಯ ಕುಂಚೇನಹಳ್ಳಿ ಗ್ರಾಮವೊಂದರಲ್ಲೇ ಸುಮಾರು ಸುಮಾರು 7 ಸಾವಿರ ಗಿಡಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.