ರಾಯಚೂರು: ನಗರದಲ್ಲಿ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆ ಜೋರಾಗಿ ನಡೆಯುತ್ತಿದ್ದು, ಅಬಕಾರಿ ಇಲಾಖೆ ನಿರಂತರ ದಾಳಿ ನಡೆಸಿದರೂ ಕ್ಯಾರೇ ಎನ್ನದ ದಂಧೆಕೋರರು ಸೇಂದಿ ಮಾರಾಟ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.
ನಗರದ ಮೈಲಾರ ನಗರದಲ್ಲಿ ಆರೋಪಿ ಬ್ರೂಸ್ಲಿ ಅಲಿಯಾಸ್ ನರಸಿಂಹಲು ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು ಒಂದೇ ತಿಂಗಳಲ್ಲಿ ನಾಲ್ಕನೇಯ ಬಾರಿ ದಾಳಿ ನಡೆಸಿದ್ದಾರೆ. ಈ ಬಾರಿ 1500 ಲೀಟರ್ ಸಿಎಚ್ ಪೌಡರ್ ಕಲಬೆರಕೆ ಸೇಂದಿ ಜಪ್ತಿ ಮಾಡಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮುಖ್ಯ ಆರೋಪಿ ಬ್ರೂಸ್ಲಿ ಪರಾರಿಯಾಗಿದ್ದು, ಹಾಜಿ, ಮಲ್ಲಯ್ಯ, ಮಲ್ಲೇಶ್ ನಾಯಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ಕಲಬೆರಕೆ ಸೇಂದಿ ತಯಾರಿಕೆಯನ್ನು ಬ್ರೂಸ್ಲಿ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾನೆ. ಎಷ್ಟೇ ಬಾರೀ ಆರೋಪಿಗೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದರೂ, ಆತನ ಅಡ್ಡೆ ಮೇಲೆ ದಾಳಿ ಮಾಡಿದ್ದರೂ ಆರೋಪಿ ಕ್ಯಾರೆ ಎನ್ನುತ್ತಿಲ್ಲ. ಆದ್ದರಿಂದ ಬ್ರೂಸ್ಲಿ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಮುಂದಾಗಿದೆ ಎಂದು ಅಬಕಾರಿ ಇಲಾಖೆ ಪ್ರಭಾರಿ ಅಧೀಕ್ಷಕ ಹನುಮಂತ ಗುತ್ತೇದಾರ್ ಹೇಳಿದ್ದಾರೆ.
Advertisement
Advertisement
ಮೊಹರಂ ಹಾಗೂ ಗಣೇಶ ಚತುರ್ಥಿ ವೇಳೆ ಮದ್ಯ ಮಾರಾಟಕ್ಕೆ ನಿಷೇಧವಿದ್ದ ಸಂದರ್ಭದಲ್ಲೂ ಎಗ್ಗಿಲ್ಲದೆ ನಗರದಲ್ಲಿ ಕಲಬೆರಕೆ ಸೇಂದಿ ಮಾರಾಟ ನಡೆದಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ದಂಧೆಕೋರರನ್ನ ನಿಯಂತ್ರಣ ಮಾಡಲು ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ.