ಬೆಂಗಳೂರು: 2017 ವರ್ಷದ ಕೊನೆ ದಿನ ಅಬಕಾರಿ ಇಲಾಖೆಗೆ ಅಂದಾಜಿಸಿದಕ್ಕಿಂತಲೂ ಹೆಚ್ಚಿನ ಆದಾಯ ಹರಿದು ಬಂದಿದೆ. ಸುಪ್ರೀಂಕೋರ್ಟ್ ಆದೇಶದ ಹೊಡೆತದಿಂದ ನಷ್ಟದಲ್ಲಿದ್ದ ಅಬಕಾರಿ ಇಲಾಖೆಯನ್ನು ಕುಡುಕರು ಪಾರು ಮಾಡಿದ್ದಾರೆ.
ಕುಡುಕರೇ ನಮ್ ಆಸ್ತಿ ಅಂತಾ ಹೇಳುತ್ತಾ ಅಬಕಾರಿ ಇಲಾಖೆ ಅಧಿಕಾರಿಗಳು ಈಗ ಮೆಲ್ಲನೆ ನಗು ಬೀರುತ್ತಿದ್ದಾರೆ. ಇದಕ್ಕೆ ಕಾರಣ ಈ ಬಾರಿಯ ಹೊಸ ವರ್ಷ. ಈ ಬಾರಿ ಡಿಸೆಂಬರ್‍ನಲ್ಲಿ 1,400 ಕೋಟಿ ಆದಾಯವನ್ನು ಕುಡುಕರು ಅಬಕಾರಿ ಇಲಾಖೆಯ ಜೇಬಿಗೆ ತುಂಬಿಸಿದ್ದಾರೆ. ಎಲ್ಲರೂ ಸೇರಿ ಪಾರ್ಟಿ ಮಾಡೋಣಾ ಅಂತಾ ಕರ್ನಾಟಕದ ಜನ ಎಣ್ಣೆ ಹೊಡೆದಿದ್ದೇ ಹೊಡೆದಿದ್ದು ಅನಿಸುತ್ತೆ. ಇದ್ರ ಎಫೆಕ್ಟ್‍ಗೆ ಕಳೆದ ವರ್ಷಕ್ಕಿಂತ ಬರೋಬ್ಬರಿ 100 ಕೋಟಿ ಆದಾಯ ಒಂದೇ ದಿನದಲ್ಲಿ ಹೆಚ್ಚಳವಾಗಿದೆ.
2016ರಲ್ಲಿ ಬಂದ ಆದಾಯ ಹೀಗಿದೆ: ಬೆಂಗಳೂರಿನಲ್ಲಿ 2016ಕ್ಕೆ ಒಟ್ಟು ದೇಶಿಯ ಮದ್ಯ 11.51 ಲಕ್ಷ ಕೇಸ್, ಬಿಯರ್ 7.56 ಲಕ್ಷ ಕೇಸ್ ಮಾರಾಟವಾಗಿತ್ತು. ಒಟ್ಟಾರೆ ರಾಜ್ಯದಲ್ಲಿ ದೇಶೀಯ ಮದ್ಯ ಮತ್ತು ಬಿಯರ್ ತಲಾ 49.2 ಲಕ್ಷ ಕೇಸ್ ನಂತೆ ಮಾರಾಟವಾಗಿದ್ದವು. ಬೆಂಗಳೂರು ನಗರದಿಂದ 325 ಕೋಟಿ ರೂ, ಆದಾಯ ಬಂದರೆ, ಇಡೀ ರಾಜ್ಯದಿಂದ 1300 ಕೋಟಿ ರೂ.ಆದಾಯ ಬಂದಿತ್ತು.
2017ರ ಆದಾಯ ಹೀಗಿದೆ: ಈ ಬಾರಿ 2017 ಡಿಸೆಂಬರ್ 31ರಂದು ಬೆಂಗಳೂರು ನಗರದಲ್ಲಿ ದೇಶಿಯ ಮದ್ಯ 11.59 ಲಕ್ಷ ಕೇಸ್ ಮಾರಾಟವಾದ್ರೆ, ಬಿಯರ್ 8.74 ಲಕ್ಷ ಕೇಸ್ ಮಾರಾಟವಾಗಿದೆ. ಕೇವಲ ಬೆಂಗಳೂರು ನಗರದಿಂದಲೇ 360 ಕೋಟಿ ಆದಾಯ ಹರಿದು ಬಂದಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ 50.17 ಲಕ್ಷ ಕೇಸ್ ದೇಶಿಯ ಮದ್ಯ ಮಾರಾಟವಾಗಿದ್ದು, 53.77 ಲಕ್ಷ ಕೇಸ್ ಮದ್ಯ ಮಾರಾಟವಾಗಿದೆ. ಹಾಗಾಗಿ ಒಟ್ಟು 1400 ಕೋಟಿ ರೂ. ಅಬಕಾರಿ ಇಲಾಖೆಯ ಖಜಾನೆ ಸೇರಿಕೊಂಡಿದೆ.