ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ವಿರುದ್ಧ ಸುಪ್ರೀಂ ಕೋರ್ಟಿನ ಮಾಜಿ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, 22 ನ್ಯಾಯಧೀಶರಿಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಅಕ್ಟೋಬರ್ 11, 2018 ರಂದು ರಂಜನ್ ಗೊಗೊಯ್ ಅವರು ನನ್ನನ್ನು ಬಲವಂತವಾಗಿ ಅಪ್ಪಿಕೊಂಡು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಬರೆದ ಪತ್ರವನ್ನು ಸ್ಕ್ರೋಲ್, ದಿ ವೈರ್, ಕ್ಯಾರವನ್ ವೆಬ್‍ಸೈಟ್‍ಗಳು ಪ್ರಕಟಿಸಿವೆ.
ಈ ಅಫಿಡವಿಟ್ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ತುರ್ತು ವಿಚಾರಣೆ ವೇಳೆ, ತನ್ನ ವಿರುದ್ಧ ಸಂಪೂರ್ಣ ಸುಳ್ಳು ಆರೋಪ ಮಾಡಲಾಗಿದೆ. ಇದು ಸುಳ್ಳು ಹಾಗೂ ಅಶ್ಲೀಲವಾಗಿದೆ. ನನ್ನ ಬ್ಯಾಂಕ್ ಖಾತೆಯಲ್ಲಿ 6.8 ಲಕ್ಷ ರೂ. ಇದ್ದು, 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನನಗೆ ಸಿಕ್ಕಿದ ಪ್ರಶಸ್ತಿ ಇದು ಎಂದು ಹೇಳಿ ತನ್ನ ವಿರುದ್ಧ ಕೇಳಿ ಬಂದ ಆರೋಪವನ್ನು ರಂಜನ್ ಗೊಗೋಯ್ ಅವರು ತಳ್ಳಿ ಹಾಕಿದ್ದಾರೆ.
ಮಹಿಳೆ ಮಾತ್ರ ಮುಖ್ಯ ನ್ಯಾಯಧೀಶರು ತಮಗೆ ಕಿರುಕುಳ ನೀಡಿದ್ದು ಸತ್ಯ. ಅಷ್ಟೇ ಅಲ್ಲದೆ ನನ್ನನ್ನು ಕೆಲಸದಿಂದ ವಜಾಗೊಳಿಸಿದ ಬಳಿಕವೂ ಮುಖ್ಯ ನ್ಯಾಯಧೀಶರು ನನಗೆ ಕಿರುಕುಳ ನೀಡಿದ್ದಾರೆ. ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿ, ತಮ್ಮ ಅಧಿಕಾರ ಬಳಸಿಕೊಂಡು ನನ್ನ ಪತಿ ಹಾಗೂ ಪತಿಯ ಸಹೋದರರನ್ನು ದೆಹಲಿ ಪೊಲೀಸ್ ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ ನಲ್ಲಿ ಜೂನಿಯರ್ ಕೋರ್ಟ್ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಸಹೋದರನನ್ನು ಕೂಡ ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ದೌರ್ಜನ್ಯಕ್ಕೊಳಗಾದ ಮಹಿಳೆ ಅಫಿಡವಿಟ್‍ನಲ್ಲಿ ಉಲ್ಲೆಖಿಸಿದ್ದಾರೆ.