ಬೆಂಗಳೂರು: ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಬಿಎಸ್‍ವೈ ವಿರುದ್ಧ ಮಾಜಿ ಆರ್‍ಎಸ್‍ಎಸ್ ಪ್ರಚಾರಕರೊಬ್ಬರು ತಿರುಗಿ ಬಿದ್ದಿದ್ದಾರೆ.
ಯಡಿಯೂರಪ್ಪ ಹಾಗೂ ಸಂಸದ ನಳೀನ್ ಕುಮಾರ್ ಕಟಿಲು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆರ್‍ಎಸ್‍ಎಸ್ ಮಾಜಿ ಪ್ರಚಾರಕ ಎನ್ ಹನುಮೇಗೌಡ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
Advertisement
ದೂರು ನೀಡಿದ್ದು ಯಾಕೆ?: ಇತ್ತೀಚೆಗೆ ಬಂಟ್ವಾಳದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು `ಕಲ್ಲಡ್ಕ ಪ್ರಭಾಕರ್ ಭಟ್ ಮುಟ್ಟಿದ್ರೆ ರಾಜ್ಯದಲ್ಲಿ ಬೆಂಕಿ ಹತ್ತಿ ಉರಿಯುತ್ತೆ’ ಅನ್ನೋ ಹೇಳಿಕೆಯೊಂದನ್ನು ನೀಡಿದ್ದರು. ಇದೊಂದು ಪ್ರಚೋದನಕಾರಿ ಹೇಳಿಕೆಯಾಗಿದ್ದು, ಈ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸರಿಗೆ ಹನುಮೇಗೌಡ ದೂರು ನೀಡಿದ್ದರು.
Advertisement
ಹನುಮೇಗೌಡ ಅವರು ಪೋಲೀಸರಿಗೆ ಈ ದೂರನ್ನು ಕಳೆದ ಶನಿವಾರ ನೀಡಿದ್ದು, ಈವರೆಗೂ ಈ ಇಬ್ಬರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಇದೀಗ ಅವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಬಿಎಸ್‍ವೈ ಹಾಗೂ ನಳೀನ್ ಕುಮಾರ್ ಕಟೀಲ್ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.