ಬೆಂಗಳೂರು: ಮಾಜಿ ರೌಡಿ ಶೀಟರ್ ನಾಗರಾಜ್ ಅಲಿಯಾಸ್ ನಾಗನ ಮನೆ ಮೇಲೆ ಪೊಲೀಸರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಈ ವೇಳೆ ಪೊಲೀಸರ ಕಣ್ತಪ್ಪಿಸಿ ಬಾಂಬ್ ನಾಗ ಪರಾರಿಯಾಗಿದ್ದಾನೆ.
Advertisement
ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಡಿ ಪೊಲೀಸರು ನಾಗನನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಕಂಪ್ಯೂಟರಸೈಡ್ ಲಾಕ್ ಇರುವ ಕಟ್ಟಡದ ಕೊನೆ ಅಂತಸ್ತಿನಲ್ಲಿ ನಾಗ ಅವಿತು ಕುಳಿತಿದ್ದು, ಕೊಠಡಿಯಲ್ಲೇ ಕುಳಿತು ಸಿಸಿಟಿವಿ ದೃಶ್ಯಾವಳಿ ಮೂಲಕ ಪೊಲೀಸರ ತಪಾಸಣೆಯನ್ನು ವೀಕ್ಷಿಸುತ್ತಿದ್ದನು. ಇದೀಗ ಆತ ಮನೆಯ ಟೆರೆಸ್ ಮೂಲಕ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಬಾಗಿಲು ಒಡೆದು ಒಳಹೋದಾಗ ಪತ್ನಿ ಮಾತ್ರ ಇದ್ದರು.
Advertisement
Advertisement
ಏನಿದು ಪ್ರಕರಣ?: ಕಳೆದ ಮಾರ್ಚ್ 18ರಂದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಎಂಬುವರನ್ನ ಅಪಹರಿಸಲಾಗಿತ್ತು. ಕಿಡ್ನ್ಯಾಪ್ ತಂಡ ಶ್ರೀರಾಮಪುರದ ನಾಗನ ಮನೆಗೆ ಉಮೇಶ್‍ರನ್ನ ಕರೆ ತಂದು 50 ಲಕ್ಷ ರೂ. ಹಣ ವಸೂಲಿ ಮಾಡಿದ್ರು. ಕೊಲೆ ಬೆದರಿಕೆ ಇದ್ದ ಕಾರಣ ಉದ್ಯಮಿ ಉಮೇಶ್ ಯಾವುದೇ ದೂರು ನೀಡಿರಲಿಲ್ಲ. ನಂತರ ಏಪ್ರಿಲ್ 07 ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಉಮೇಶ್ ದೂರು ದಾಖಲಿಸಿದ್ರು. ಹೀಗಾಗಿ ಕೋರ್ಟ್‍ನಿಂದ ಸರ್ಚ್ ವಾರೆಂಟ್ ತಂದು ಹೆಣ್ಣುರು ಇನ್ಸ್ ಪೆಕ್ಟರ್ ಶ್ರೀನಿವಾಸ್, ಮಲ್ಲೇಶ್ವರಂ ಎಸಿಪಿ ಸೇರಿದಂತೆ 40 ಕ್ಕೂ ಹೆಚ್ಚು ಪೊಲೀಸರು ನಾಗನ ಮನೆ ಹಾಗೂ ಸ್ನೇಹ ಸೇವಾ ಸಮಿತಿ ಕಚೇರಿಯಲ್ಲಿ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ತಪಾಸಣೆಗೆ ಬಂದಾಗ ರೌಡಿ ನಾಗ ಬಾಗಿಲು ಹಾಕಿಕೊಂಡಿದ್ದಾನೆ.
Advertisement
ಯಾರು ಈ ಬಾಂಬ್ ನಾಗ?: ತನ್ನ 20ನೇ ವಯಸ್ಸಿಗೆ ರೌಡಿಸಂಗೆ ಕಾಲಿಟ್ಟಿದ್ದ ನಾಗರಾಜ್, 80ರ ದಶಕದಲ್ಲಿ ಬೆಂಗಳೂರನ್ನೇ ನಡುಗಿಸಿದ್ದ ರೌಡಿಶೀಟರ್. 1981 ರಿಂದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, 1984-85ರಲ್ಲಿ ರೌಡಿ ಗ್ಯಾಂಗ್ ಜೊತೆ ಸೇರಿ ಮಾಮೂಲಿ ವಸೂಲಿಗೆ ರೌಡಿಶೀಟರ್ ರಾಜೇಂದ್ರನಿಗೆ ಬೆದರಿಕೆ ಹಾಕಿದ್ದ. ಈ ಸಂದರ್ಭದಲ್ಲಿ ರೌಡಿಶೀಟರ್‍ಗಳಾದ ರಾಜೇಂದ್ರ ಮತ್ತು ಜೀಬ್ರಾ ಮುನಿಸ್ವಾಮಿ ನಾಗರಾಜನ ಮೇಲೆ ದಾಳಿ ಮಾಡಿದ್ದರು. ಆ ನಂತ್ರ ಶ್ರೀರಾಮಪುರದ ಅರುಣಾ ಥಿಯೇಟರ್ ಬಳಿ ನಾಗರಾಜನ ಮೇಲೆ ಬಾಂಬ್ ದಾಳಿ ನಡೆಯುತ್ತದೆ. ಅಂದಿನಿಂದ ನಾಗರಾಜನಿಗೆ ಬಾಂಬ್ ನಾಗ ಎಂದು ಹೆಸರು ಬಂದಿದೆ.
ನಾಗನ ವಿರುದ್ಧದ ಪ್ರಕರಣ: ದರೋಡೆ, ಬೆದರಿಕೆ, ಹಲ್ಲೆ, ಕಿಡ್ನ್ಯಾಪ್, ಕೊಲೆ ಯತ್ನ ಸೇರಿದಂತೆ ಸುಮಾರು 32 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ನೆಲಮಂಗಲ, ಶ್ರೀರಾಮಪುರ, ಹೆಣ್ಣೂರು ಠಾಣೆ ಸೇರಿದಂತೆ ಸಿಸಿಬಿಗೂ ಈತ ಬೇಕಾಗಿದ್ದ. ಶಿವಕಾಶಿಯಲ್ಲಿ ಪಟಾಕಿ ತಯಾರಿಸೋದನ್ನ ಕಲಿತಿದ್ದ ನಾಗ ಚಕ್ರಿ ಮೇಲೆ ದಾಳಿ ಮಾಡಿದ್ದ. ತಮಿಳುನಾಡಿನಿಂದ ಗೂಂಡಾಗಳನ್ನ ಕರೆಯಿಸಿ ಬೆದರಿಕೆ, ಸುಲಿಗೆ, ವಸೂಲಿ ಮಾಡ್ತಿದ್ದ. ಇನ್ನು ಈತನ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ 3 ಕೇಸ್, ಕರ್ತವ್ಯಕ್ಕೆ ಅಡ್ಡಪಡಿಸಿದಂತೆ 5 ಕೇಸ್, ಕೆಒಪಿಡಿ ಕಾಯ್ದೆಯಡಿ 7 ಕೇಸುಗಳಿವೆ.
ಮುಖ್ಯವಾಗಿರೋ ಕೇಸ್: 1990 ರ ಜೂ.8 ರಂದು ಸಂಜೆ 7 ಗಂಟೆಗೆ ಸಹಚರರೊಂದಿಗೆ ಸೇರಿ ಸೆಲ್ವಕುಮಾರಿ ಅಲಿಯಾಸ್ ಸೆಲ್ವ ನಯಾನಿ ಎಂಬವರನ್ನು ಅಪಹರಿಸಿದ್ದ. ಈ ವೇಳೆ ಸೆಲ್ವ ಕುಮಾರ್ ರಕ್ಷಣೆಗೆ ಬಂದ ಸ್ಥಳಿಯರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ.
ಸುಲಿಗೆ ಪ್ರಕರಣ: ಮೇ.11 1992 ರಾತ್ರಿ 9 ಗಂಟೆ ಸುಮಾರಿಗೆ ಹನುಮಂತನಗರದಲ್ಲಿ ಪ್ರಭಾಕರ್ ಎಂಬವರಿಗೆ ಹಣ ಕೊಡುವಂತೆ ಒತ್ತಾಯಿಸಿದ್ದು, ಈ ವೇಳೆ ಅವರು ಹಣ ನೀಡಲು ನೀರಾಕರಿಸಿದಾಗ ಹಲ್ಲೆ ಮಾಡಿದ್ದ. ಅಲ್ಲದೇ ಪ್ರಾಣ ಬೆದರಿಕೆ ಕೂಡ ಹಾಕಿದ್ದ. ಹೀಗಾಗಿ ಸುಲಿಗೆ ಪ್ರಕರಣದಲ್ಲೂ ನಾಗ ಬಂಧನವಾಗಿದ್ದ.
ನಕಲಿ ದಾಖಲೆ: ಫೆ.10 1998ರಲ್ಲಿ ಸಾಲ ಪಡೆಯಲು ಚಿಕ್ಕಪೇಟೆಯ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲೆ ಒದಗಿಸಿ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ: ಬಾಂಬ್ ನಾಗನ ಮನೆಯಲ್ಲಿ ಮೊದಲ ಮಹಡಿಯಲ್ಲೇ 100 ಕೋಟಿ ರೂ. ಹಳೇ, ಹೊಸ ನೋಟು ಪತ್ತೆ- ಬೆಚ್ಚಿಬಿದ್ದ ಪೊಲೀಸರು
ಅತಿಕ್ರಮಣ ಪ್ರವೇಶ: 4 ಆಗಸ್ಟ್ 2004ರಂದು ಓಕಳಿಪುರಂನಲ್ಲಿ ರಘುನಾಥ್ ಅನ್ನೋರ ಮನೆಗೆ ಅತಿಕ್ರಮಣ ಪ್ರವೇಶ ಮಾಡಿ ಕ್ಷುಲ್ಲಕ ಕಾರಣಕ್ಕೆ ಗೇಟ್ ಮುರಿದು ಹಾಕಿ ಕೊಲೆ ಬೆದರಿಕೆ ಹಾಕಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 27 2006ರಲ್ಲಿ ಶಿಕ್ಷೆ ವಿಧಿಸಲಾಗಿತ್ತು.
ಕೊಲೆ ಯತ್ನ: 2010ರ ಜೂನ್ 21ರಂದು ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಮನೆ ಹೋಟೆಲ್ ಮುಂಭಾಗದಲ್ಲಿ ಮಾಜಿ ಕಾರ್ಪೋರೇಟರ್ ಗೋವಿಂದರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆಸಲಾಗಿತ್ತು.
ಪತ್ನಿ ಪಾಲಿಕೆಯ ಮಾಜಿ ಸದಸ್ಯೆ: 2 ಬಾರಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದ ನಾಗನ ಪತ್ನಿಯೂ ಮಾಜಿ ಪಾಲಿಕೆ ಸದಸ್ಯೆ. 2002-07 ರವರೆಗೆ ಗಂಡ-ಹೆಂಡತಿ ಕಾರ್ಪೋರೇಟರ್ ಆಗಿದ್ದು, ಏಕಕಾಲದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ನಾಗ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ. ಆದ್ರೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಿರುದ್ಧ ಸಣ್ಣ ಅಂತರದಲ್ಲಿ ಸೋತಿದ್ದ. ಬಳಿಕ ಬಿಎಸ್‍ಆರ್ ಪಕ್ಷಕ್ಕೂ ಸೇರ್ಪಡೆ ಆಗಿ ಕಚೇರಿ ಒಳಗೆ ಶ್ರೀರಾಮುಲು ಖುದ್ದಾಗಿ ಕರೆದುಕೊಂಡು ಹೋಗಬೇಕೆಂದು ಹಠ ಹಿಡಿದಿದ್ದ. ಕೊನೆಗೆ ಶ್ರೀರಾಮುಲು ಖುದ್ದಾಗಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು.
ನಾಗನ ಮಕ್ಕಳ ಮೇಲೂ ಪ್ರಕರಣಗಳಿವೆ: ಬಾಂಬ್ ನಾಗನಿಗೆ ಈಗ 54 ವರ್ಷ, ಇಬ್ಬರು ಮಕ್ಕಳು ಇದ್ದಾರೆ. ಮಕ್ಕಳ ಮೇಲೂ ದೊಂಬಿ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಬಹುತೇಕ ಪ್ರಕರಣಗಳು ಖುಲಾಸೆಯಾಗಿದ್ದು, ಇತ್ತೀಚೆಗೆ ಉದ್ಯಮಿ ಅಪಹರಿಸಿ ಸುದ್ದಿಯಾಗಿದ್ದ. ಇತ್ತೀಚೆಗೆ ರೌಡಿಶೀಟರ್ ಪಟ್ಟಿಯಿಂದ ನಾಗನ ಹೆಸರು ಕೈಬಿಡುವಂತೆ ಕೋರ್ಟ್ ಕೂಡ ಆದೇಶ ನೀಡಿತ್ತು.