-ಬಿಎಸ್‍ವೈ ರಾಜಾ ಹುಲಿ ಅಲ್ಲ, ರಾಜಾ ಇಲಿ
ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಾ ಹುಲಿ ಅಲ್ಲ, ರಾಜಾ ಇಲಿ. ಅವರಿಗೆ ಸ್ವಾಭಿಮಾನವಿದ್ದರೆ ಪ್ರಧಾನಿ ಮೋದಿ ಎದುರು ತಾಕತ್ತು ಪ್ರದರ್ಶಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಸ್‍ವೈ ಅವರನ್ನು ರಾಜ್ಯದಲ್ಲಿ ರಾಜಾ ಹುಲಿ ಎನ್ನಲಾಗುತ್ತದೆ. ಆದರೆ, ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿಯನ್ನು ನೋಡಿದರೆ ಬಿಎಸ್‍ವೈ ನಡುಗುತ್ತಾರೆ. ನೆರೆ ಪರಿಹಾರದ ವಿಷಯದಿಂದ ಹಿಡಿದು ಈಗಿನ ಸಚಿವ ಸಂಪುಟ ವಿಸ್ತರಣೆವರೆಗೂ ಹೈಕಮಾಂಡ್ ಮೊರೆ ಹೋದರೂ ಯಾವುದಕ್ಕೂ ಬಿಎಸ್‍ವೈಗೆ ಕೇಂದ್ರದ ನಾಯಕರು ಸ್ಪಂದನೆ ನೀಡಿಲ್ಲ. ತುಮಕೂರಿನಲ್ಲಿ ಕೈ ಮುಗಿದು ಕೇಳಿಕೊಂಡರೂ ಭಾಷಣದಲ್ಲಿ ಮೋದಿ ನೆರೆ ಪರಿಹಾರದ ಕುರಿತು ಮಾತನಾಡದಿರುವುದು ಕೇವಲ ಅವರಿಗೆ ಮಾಡಿದ ಅವಮಾನವಲ್ಲ. ಇದು ರಾಜ್ಯಕ್ಕೆ ಎಸಗಿದ ಅವಮಾನ. ಬಿಎಸ್‍ವೈ ಅವರು ಕೇಂದ್ರದ ಎದುರು ತಾಕತ್ತು ಪ್ರದರ್ಶನ ಮಾಡಲಿ ಎಂದರು.
Advertisement
Advertisement
ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ನಮ್ಮ ಹೈಕಮಾಂಡ್ ಹಾಗೂ ರಾಜ್ಯದ ನಾಯಕರ ನಡುವೆ ಸಮನ್ವಯತೆ ಇದೆ. ಕೇಂದ್ರದ ನಾಯಕರೂ ಎಂದೂ ಇಲ್ಲಿನವರನ್ನು ಅಸಡ್ಡೆಯಿಂದ ನೋಡಿಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ತಡವಾಗುತ್ತಿರುವುದನ್ನು ಸಮರ್ಥಿಸಿಕೊಂಡರು.
Advertisement
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಘಟನೆಗೆ ನೇರ ಹೊಣೆ. ಗೃಹಸಚಿವರು ಹಾಗೂ ಅವರ ಇಲಾಖೆಗಳು ಏನು ಮಾಡುತ್ತಿವೆ ಎಂದು ತಿಳಿಯುತ್ತಿಲ್ಲ. ರಾಜ್ಯದ ಬೇಹುಗಾರಿಕಾ ಇಲಾಖೆ ಸತ್ತು ಹೋದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
Advertisement
ಶಾ ಸವಾಲು ಸ್ವೀಕಾರ: ಇತ್ತೀಚೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್ ಶಾ, ಸಿಎಎ ಕುರಿತಂತೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಅವರಿಗೆ ಬರುವಂತೆ ಸವಾಲು ಹಾಕಿದ್ದಾರೆ. ಇದಕ್ಕೆ ನಾವು ಸಿದ್ಧರಿದ್ದೇವೆ. ಸಚಿವ ಪ್ರಹ್ಲಾದ ಜೋಶಿ ಅವರು ಮೊದಲು ನಮ್ಮನ್ನು ಎದುರಿಸಲಿ. ಅವರು ಎಲ್ಲಿ ಯಾವಾಗ ಸಮಯ ನೀಡಿದರೂ ನಾನು ಹಾಗೂ ಕಾಂಗ್ರೆಸ್ ನಾಯಕರು ಚರ್ಚೆಗೆ ಸಿದ್ಧರಿಸಿದ್ದೇವೆ ಎಂದು ಪ್ರತಿ ಸವಾಲು ಎಸೆದರು.
ಸಿಎಎ, ಎನ್.ಆರ್.ಸಿ ಕುರಿತಂತೆ ಮಾತನಾಡಿದ ಅವರು, ಶಾ-ಮೋದಿ ದೇಶಕ್ಕೆ ಶನಿಗಳಂತೆ ವಕ್ಕರಿಸಿದ್ದಾರೆ. ಕೇಂದ್ರ ಸರ್ಕಾರದ ಇಂಥ ನಿರ್ಧಾರದಿಂದ ವಿಶ್ವದ ರಾಷ್ಟ್ರಗಳ ಪ್ರಜಾಪ್ರಭುತ್ವ ಆಡಳಿತದ ಕುರಿತು ನಡೆದ ಸಮೀಕ್ಷೆಯಲ್ಲಿ ಭಾರತ 10 ಸ್ಥಾನ ಕುಸಿಯುವಂತಾಗಿದೆ. ಕುಸಿದಿರುವ ದೇಶದ ಆರ್ಥಿಕ ಪರಿಸ್ಥಿತಿಯಿಂದ ಜನರ ಚಿತ್ತ ಬೇರೆಡೆ ಹೊರಳಿಸಲು ಸಿಎಎ ಯಂತಹ ಕಾನೂನು ಜಾರಿಗೆ ಸರ್ಕಾರ ಮುಂದಾಗಿದೆ ಎಂದರು.