ಬೆಂಗಳೂರು: ಅತೃಪ್ತ ಶಾಸಕರಲ್ಲೊಬ್ಬರು ಒಬ್ಬರಾದ ರಾಮಲಿಂಗಾ ರೆಡ್ಡಿಯವರು ಒಳ್ಳೆಯ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ವಾಪಸ್ ಬರುವಂತೆ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರು ರಾಜೀನಾಮೆ ವಾಪಸ್ ಪಡೆದುಕೊಳ್ತಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವಂತಾಗಲಿ ಎಂದು ಆಶೀಸುವುದಾಗಿ ಅವರು ತಿಳಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಗಿಸಲು ಏನೆಲ್ಲ ಸಂಚು ಮಾಡಬೇಕೋ ಅದನ್ನೆಲ್ಲ ಬಿಜೆಪಿ ಮಾಡುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವದ ಮೌಲ್ಯಗಳು, ಜನಾದೇಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋದು ಇದೆ. ಹಾಗೆ ಎಲ್ಲರಿಗೂ ಒಂದು ಕಾಲ ಬರುತ್ತದೆ ಎಂದು ಗರಂ ಆದರು.
ಬಿಜೆಪಿಗೆ ಯಾವುದೇ ಪಕ್ಷ ಬೆಂಬಲ ನೀಡಲು ಬಂದಿರಲಿಲ್ಲ. ಹಾಗಾಗಿ ನಾವು ಸರ್ಕಾರ ರಚನೆ ಮಾಡಿದೆವು. ಹೀಗಾಗಿ ಬಿಜೆಪಿಯವರು ಅನ್ಯ, ವಾಮಮಾರ್ಗಗಳನ್ನು ಹಿಡಿದಿದ್ದಾರೆ ಎಂದು ಅವರು ಕಿಡಿಕಾರಿದರು.
ಕೇಂದ್ರ ಬಜೆಟ್ ನ ಮರುದಿನ ಅಂದರೆ ಶನಿವಾರ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಆ ಬಳಿಕ ರಾಮಲಿಂಗಾ ರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಹೊರತು ಪಡಿಸಿ ಉಳಿದೆಲ್ಲ ಶಾಸಕರು ಅಂದೇ ಮುಂಬೈಗೆ ಹಾರಿದ್ದಾರೆ. ಅಲ್ಲದೆ ಸ್ಪೀಕರ್ ಅವರು ನಮ್ಮ ರಾಜೀನಾಮೆ ಅಂಗೀಕರಿಸದೇ ನಾವು ಬೆಂಗಳೂರಿಗೆ ವಾಪಸ್ ಆಗುವ ಮಾತೇ ಇಲ್ಲ ಎಂದು ಎಚ್ಚರಿಸಿದ್ದಾರೆ. ಇತ್ತ ಅಸಮಾಧಾನಿತರನ್ನು ಮನವೊಲಿಸುವ ಪ್ರಯತ್ನ ಕೈ-ತೆನೆಯಿಂದ ಭರದಿಂದ ಸಾಗುತ್ತಿದ್ದು, ಕಾಂಗ್ರೆಸ್ಸಿನ ಎಲ್ಲರು ತಮ್ಮ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆ.