ಲಕ್ನೋ: ನಟಿ, ಮಾಡೆಲ್ ಅರ್ಚನಾ ಗೌತಮ್ ಉತ್ತರಪ್ರದೇಶ ಚುನಾವಣೆಯಲ್ಲಿ ಸೋತಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಸೋಶಿಯಲ್ ಮೀಡಿಯಾ ಮೂಲಕವಾಗಿ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಮಾಜಿ ಮಿಸ್ ಬಿಕಿನಿ ಇಂಡಿಯಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್, ಹಸ್ತಿನಾಪುರ ಕ್ಷೇತ್ರದಿಂದ ಕಾಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಯುಪಿ ಚುನಾವಣೆಯಲ್ಲಿ ಕೇವಲ 1,519 ಮತಗಳನ್ನು ಪಡೆಯುವ ಮೂಲಕವಾಗಿ ಭಾರತೀಯ ಜನತಾ ಪಕ್ಷದ ದಿನೇಶ್ ಖಟಿಕ್ ವಿರುದ್ಧವಾಗಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ.
ನಾನು ಹಸ್ತಿನಾಪುರದ ಜನರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದ್ದೇನೆ. ಆದರೆ ನಾನು ಅವರ ನಂಬಿಕೆಯನ್ನು ಪಡೆಯಲಿಲ್ಲ. ಶೀಘ್ರದಲ್ಲೇ ನಾನು ಅವರ ನಂಬಿಕೆಯನ್ನು ಗಳಿಸಿಕೊಳ್ಳುತ್ತೇನೆ. ಮಗು ಬಿದ್ದ ನಂತರವೇ ನಡೆಯಲು ಕಲಿಯುತ್ತದೆ. ಯಾರೂ ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಕಲಿತು ಹುಟ್ಟುವುದಿಲ್ಲ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಜೊತೆಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಬಿಕಿನಿ ಗರ್ಲ್ಗೆ ಸೋಲು
View this post on Instagram
ಚುನಾವಣಾ ಅಭ್ಯರ್ಥಿ ಎಂದು ಸುದ್ದಿಯಾದಾಗಿನಿಂದಲೂ ಮಿಸ್ ಬಿಕಿನಿ ಇಂಡಿಯಾ ವಿಜೇತೆಯಾಗಿದ್ದ ಅರ್ಚನಾ ಗೌತಮ್ ಅವರ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಮಾತನಾಡಿದ ಅರ್ಚನಾ ಗೌತಮ್, ನಾನು ಮಿಸ್ ಬಿಕಿನಿ ಸ್ಪರ್ಧೆಯಲ್ಲಿ 2018ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ನಾನು 2014ರಲ್ಲಿ ಮಿಸ್ ಉತ್ತರ ಪ್ರದೇಶ ಮತ್ತು 2018ರಲ್ಲಿ ಮಿಸ್ ಕಾಸ್ಮೊ ವರ್ಲ್ಡ್ ಆಗಿದ್ದೆ. ನನ್ನ ರಾಜಕೀಯ ವೃತ್ತಿಜೀವನದೊಂದಿಗೆ ನನ್ನ ವೃತ್ತಿಯನ್ನು ಒಂದೇ ಎಂದು ನೋಡಬೇಡಿ ಎಂದು ನಾನು ಜನರನ್ನು ವಿನಂತಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ
2018ರಲ್ಲಿ ಮಿಸ್ ಉತ್ತರ ಪ್ರದೇಶ ಪ್ರಶಸ್ತಿ ವಿಜೇತೆಯಾಗಿರುವ ಅರ್ಚನಾ 2015ರಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಅರ್ಚನಾ ಗೌತಮ್ ಮಿಸ್ ಬಿಕಿನಿ ಇಂಡಿಯಾ 2018 ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಮಿಸ್ ಕಾಸ್ಮೋಸ್ ವರ್ಲ್ಡ್ 2018ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮೋಸ್ಟ್ ಟ್ಯಾಲೆಂಟ್ 2018 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಈಗ ಸೋತಿರಬಹುದು ಮುಂದೆ ಜನರ ಪ್ರೀತಿ ಗಳಿಸಿಕೊಳ್ಳುತ್ತೇನೆ ಎನ್ನುವ ಭರವಸೆಯ ಮಾತುಗಳನ್ನಾಡಿದ್ದಾರೆ.