ನಮ್ಮ ನಾಯಕರು ಬಳೆ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ: ಕರಂದ್ಲಾಜೆಗೆ ಉಮಾಶ್ರೀ ಪ್ರಶ್ನೆ

Public TV
2 Min Read
Umashree Shobha

– ಟಗರಿನ ವಿಷಯಕ್ಕೆ ಬಂದ್ರೆ ಗುದ್ದಲಿದೆ

ಹುಬ್ಬಳ್ಳಿ: ನಮ್ಮ ನಾಯಕರು ಬಳೆ ಹಾಕಿಕೊಂಡರೆ, ನಿಮ್ಮ ನಾಯಕರು ಸೀರೆ ಉಡುತ್ತಾರಾ ಎಂದು ಮಾಜಿ ಸಚಿವೆ ಉಮಾಶ್ರೀ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದ್ದಾರೆ.

ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವೆ, ಶೋಭಾ ಕರಂದ್ಲಾಜೆ ಅವರನ್ನು ಏನು ಮಾಡಬೇಕು? ಅಂತವರಿಗೆ ಮತ ಹಾಕಬೇಕಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದ ಅವರು, ಅವಳಿಗೆ ನಾಚಿಕೆ ಆಗಬೇಕು. ಒಂದು ಹೆಣ್ಣು ಮಗಳು ಹೇಗೆ ಇರಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

Umashree A

ನಮ್ಮ ಸಾಧನೆ, ಯೋಜನೆಗಳನ್ನು ನಿಮ್ಮ ಮುಂದಿಟ್ಟು ಮತ ಕೇಳುತ್ತೇವೆ. ಇದು ಸರಿಯಾದ ದಾರಿ. ಆದರೆ ಧರ್ಮದಲ್ಲಿ ಬೆಂಕಿ ಹಚ್ಚಿ ನಾವು ಮತ ಕೇಳಿಲ್ಲ. ಸರ್ವಾಧಿಕಾರಿ ಧೋರಣೆ ಮೂಲಕ ಮತ ಕೇಳಿ ಪಡೆಯುವುದು ಬಿಜೆಪಿಯವರ ಕೆಲಸ. ಸೈನಿಕರ ಸಾವಿನ ಮೇಲೆ ಮತ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ, ಮುಂದೆ ಕೂಡ ಮಾಡುವುದಿಲ್ಲ. ಅವರ ಬಾಯಿಂದ ಹೊಲಸು ಪದಗಳೇ ಬರುತ್ತವೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರ ಬಾಯಲ್ಲಿ ಹೂಗಳೇ ಉದುರುತ್ತವೆ. ಆನೆ ಹೋಗುತ್ತಾ ಇರುತ್ತೆ, ಶ್ವಾನ ಬೋಗಳುತ್ತಾ ಇರುತ್ತೆ ಎಂದು ಉಮಾಶ್ರೀ ಅವರು ಬಿಜೆಪಿಯವರನ್ನು ನಾಯಿಗೆ ಹೋಲಿಸಿದರು.

Umashree 1

ಇದಕ್ಕೂ ಮುನ್ನ ಕುಂದಗೋಳ ತಾಲೂಕಿನ ಹೀರೆಗುಂಜಳ ಗ್ರಾಮದಲ್ಲಿ ಮಾತನಾಡಿದ ಉಮಾಶ್ರೀ ಅವರು, ಟಗರಿನ ವಿಷಯಕ್ಕೆ ಬಂದರೆ ಟಗರು ಗುದ್ದಲಿದೆ. ಸಿದ್ದರಾಮಯ್ಯ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಕೈಗೆ ಬಂಗಾರದ ಬಳೆ ತೊಡಿಸಬೇಕು. ಕಬ್ಬಿಣದ ಬಳೆ ಹಾಕಿಕೊಂಡು ಹೋಗುವುದು ಜೈಲಿಗೆ ಎಂದು ಹೇಳಿದರು.

ಶೋಭಾ ಕರಂದ್ಲಾಜೆ ಹೇಳಿದ್ದೇನು?:
ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟಿಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಹೇಳಿದ್ದರು.

siddu shobha

ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನು ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನು ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಕೈಲಾಗದವರು ಮೈ ಪರಚಿಕೊಂಡರು ಎನ್ನುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಅವರ ಪಕ್ಷದ ಸಾಧನೆ ಬಗ್ಗೆ ಹೇಳಲಿ, ಅದನ್ನು ಬಿಟ್ಟು ಬಾಯಿ ಬಿಟ್ಟರೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುತ್ತಾರೆ ಎಂದು ಹರಿಹಾಯ್ದಿದ್ದರು.

Share This Article
Leave a Comment

Leave a Reply

Your email address will not be published. Required fields are marked *