ಬೆಳಗಾವಿ: ಹುಕ್ಕೇರಿ ಮತಕ್ಷೇತ್ರ (Hukkeri Constituency) ದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಬಯಸಿದ್ದ ಮಾಜಿ ಸಚಿವ ಶಶಿಕಾಂತ್ ನಾಯ್ಕ್ (Shashikant Naik) ಬಿಜೆಪಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಕತ್ತಿ ಕುಟುಂಬದ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಶಶಿಕಾಂತ್ ನಾಯ್ಕ್ ತಿಳಿಸಿದ್ದಾರೆ.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಬಿಜೆಪಿ (BJP) ಯಲ್ಲಿ ಕೆಲಸ ಮಾಡುತ್ತ ಬಂದಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಹಳ್ಳಿಮಟ್ಟದಿಂದ ಬೆಳೆಸಲು ಬಾಬಾಗೌಡ ಪಾಟೀಲ್ ಜೊತೆ ಕೆಲಸ ಮಾಡಿದ್ದೇನೆ. ಕೇವಲ ಒಂದು ಸಲ ಮಾತ್ರ ನನಗೆ ಹುಕ್ಕೇರಿ ಮತಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಆ ವೇಳೆ ದಿ.ಉಮೇಶ್ ಕತ್ತಿ (Umesh Katti) ವಿರುದ್ಧ ಗೆದ್ದು ಮಂತ್ರಿ ಕೂಡ ಆಗಿದ್ದೆ. 243 ಕೋಟಿ ರೂಪಾಯಿ ಹಣ ಬಿಡುಗಡೆ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದೇನೆ. ಅನೇಕ ನೀರಾವರಿ ಯೋಜನೆ ಸೌಲಭ್ಯ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ
Advertisement
Advertisement
ಉಮೇಶ್ ಕತ್ತಿ ಬಿಜೆಪಿಗೆ ಪಕ್ಷಕ್ಕೆ ಬಂದ ಕೂಡಲೇ ನನಗೆ ಎಂಎಲ್‍ಸಿ (MLC) ಸ್ಥಾನ ಕೊಟ್ಟರು. ಕೇವಲ 11 ತಿಂಗಳು ಮಾತ್ರ ಎಂಎಲ್ಸಿ ಮಾಡಿದ್ರು. ಬಳಿಕ ಪೂರ್ಣ ಪ್ರಮಾಣದ ಎಂಎಲ್‍ಸಿ ಮಾಡೋ ಭರವಸೆ ಹುಸಿ ಆಯಿತು. ಈ ಸಲ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗೋ ನಿರೀಕ್ಷೆ ಇತ್ತು. ಆದರೆ ಹುಕ್ಕೇರಿ ಕ್ಷೇತ್ರದ ಟಿಕೆಟ್ ನಿಖಿಲ್ ಕತ್ತಿಗೆ ನೀಡಲಾಗಿದೆ. ಕುಟುಂಬದ ರಾಜಕಾರಣವನ್ನು ಬಿಜೆಪಿ ವಿರೋಧ ಮಾಡುತ್ತದೆ ಅಂತಾರೆ. ಆದರೆ ಒಂದೇ ಮನೆಯಲ್ಲಿ ಇಬ್ಬರಿಗೆ ಟಿಕೆಟ್ ಸಿಕ್ಕಿರುವುದು ವಿಪರ್ಯಾಸ. ಒಂದೇ ಮನೆಯಲ್ಲಿ ಎರಡು ಟಿಕೆಟ್ ಕೊಟ್ಟಿದ್ದಕ್ಕೆ ಶಶಿಕಾಂತ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು.
Advertisement
ಕತ್ತಿ ಕುಟುಂಬದಿಂದ ಅನೇಕ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದ ಶಶಿಕಾಂತ್ ನಾಯ್ಕ್, ಪಕ್ಷ ನನಗೆ ಯಮಕನಮರಡಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಚುನಾವಣೆಯ ಉಸ್ತುವಾರಿ ಕೊಟ್ಟಿದೆ. ಅದೆಲ್ಲ ಸ್ಥಾನಕ್ಕೂ ನಾನು ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇನೆ. ನನ್ನ ಅವಶ್ಯಕತೆ ಪಕ್ಷಕ್ಕೆ ಇಲ್ಲ ಎಂದು ಅನಿಸುತ್ತದೆ. ಬಿಜೆಪಿಯ ಎಲ್ಲ ಜವಾಬ್ದಾರಿಗೆ ರಾಜೀನಾಮೆ ನೀಡುತ್ತೇನೆ. ರೈತ ಮುಖಂಡರು, ಕಾರ್ಯಕರ್ತರ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ. ನಾಳೆ ಬೆಂಗಳೂರಿಗೆ ಹೋಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಣಯ ಮಾಡಿದ್ದೇನೆ ಎಂದರು.