ಬೆಂಗಳೂರು: ಲೋಕೋಪಯೋಗಿ ಸಚಿವ ರೇವಣ್ಣ ನಿಂಬೆಹಣ್ಣು ಕೊಳೆತು ಹೋಗಿದೆ. ರೇವಣ್ಣ ಅವರ ಆ ನಿಂಬೆಹಣ್ಣಿಗೆ ದೇವೇಗೌಡರೇ ಬಲಿಯಾಗಿ ಸೋತಿದ್ದಾರೆ. ಸಿದ್ದರಾಮಯ್ಯಗೆ ಸ್ವಾಭಿಮಾನ ಇದ್ದರೆ ಜೆಡಿಎಸ್ ಗೆ ನೀಡಿರೋ ಬೆಂಬಲ ವಾಪಸ್ ಪಡೆಯಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸವಾಲೆಸೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನೂ ಆಪರೇಶನ್ ಕಮಲ ಮಾಡಲ್ಲ. ಸರ್ಕಾರವೇ ಬೀಳುತ್ತದೆ. ಯಡಿಯೂರಪ್ಪ ದೈವ ಭಕ್ತರು. ನಾಡಿಗೆ ಒಳ್ಳೆಯದಾಗಲಿ ಎಂದು ಹೋಮ ಹವನ ಮಾಡಿಸಿದ್ದರು. ಅದಕ್ಕೆ ಬಿಜೆಪಿಗೆ 25 ಸೀಟು ಬಂತು. ಜೆಡಿಎಸ್ ನವರು, ದೇವೇಗೌಡರ ಕುಟುಂಬದವರು ಜ್ಯೋತಿಷಿಗಳು, ಮಾಟ ಮಂತ್ರದ ಬೆನ್ನು ಹತ್ತಿದ್ದರು. ಅದಕ್ಕೆ ಹೀಗಾಯ್ತು, ರೇವಣ್ಣ, ಭವಾನಿ ರೇವಣ್ಣ ನಿಂಬೆಹಣ್ಣು ಮಂತ್ರ ಮಾಡಿಸಿ ಪಾಪ ದೇವೇಗೌಡರನ್ನೇ ಬಲಿ ತೆಗೆದುಕೊಂಡರು ಎಂದು ಕಿಚಾಯಿಸಿದರು.
ಈಗಲೂ ಕುಮಾರಸ್ವಾಮಿಗೆ ಮಾನಮರ್ಯಾದೆ ನೈತಿಕತೆ ಇದ್ದರೆ ಜನಾದೇಶಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಶಾಸಕರನ್ನು ಅತೃಪ್ತರು ಎನ್ನುವುದು ಸರಿಯಲ್ಲ. ಅವರೆಲ್ಲಾ ಗೌರವಾನ್ವಿತ ಶಾಸಕರು. ಕೆಲವರಿಗೆ ಸಚಿವ ಸ್ಥಾನ ತಪ್ಪಿಸಿದರು. ಕ್ಷೇತ್ರಕ್ಕೆ ಅನುದಾನ ಸಿಗದಂತೆ ಮಾಡಿದರು. ಅವರನ್ನೆಲ್ಲಾ ಎಷ್ಟು ದಿನ ಎಂದು ಹಿಡಿದಿಟ್ಟುಕೊಳ್ಳುತ್ತೀರಿ. ಇಷ್ಟರಲ್ಲೇ ಅವರೆಲ್ಲಾ ಹೊರಗೆ ಬರುತ್ತಾರೆ. ಈ ಸರ್ಕಾರ ಪತನ ಆಗೋದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಈಗ ಇರೋದು ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಪೂರ್ವದಲ್ಲೇ ಮಹಾತ್ಮಾಗಾಂಧಿ ಈ ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಎಂದಿದ್ದರು. ಈಗ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿದೆ. ಧೈರ್ಯ ಇದ್ದರೆ ಕಾಂಗ್ರೆಸ್ ನ್ನು ವಿಸರ್ಜನೆ ಮಾಡಲಿ ಎಂದು ತಿಳಿಸಿದರು.