– ರಮೇಶ್ ರಾಜೀನಾಮೆ ಕೊಟ್ರೆ ನಾವೇನು ಮಾಡೋಕಾಗುತ್ತೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದ ಮುಖಂಡರು ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಡರಾತ್ರಿ ತಮ್ಮ ಗೋಕಾಕ್ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ತಡರಾತ್ರಿ ಮನೆಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅವರು ಬೆಳಗ್ಗೆ 8 ಗಂಟೆ ಬಳಿಕ ಮತ್ತೆ ಮನೆಯಿಂದ ಹೊರ ನಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ವೇಳೆ ಬೆಳಗಾವಿಗೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿತ್ತು.
ಕಳೆದ 8 ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಫೋನ್ ಸ್ವಿಚ್ ಆಫ್ ಮಾಡಿದ್ದ ರಮೇಶ್ ಜಾರಕಿಹೊಳಿ ಅವರು, 8 ದಿನಗಳ ಬಳಿಕ ಮನೆಗೆ ಆಗಮಿಸಿದ್ದರು. ಬೆಳಗಾವಿಯ ಗೋಕಾಕ್ ನ ನಿವಾಸಕ್ಕೆ ಬಂದಿದ್ದ ಅವರು ಬೆಳಗಾವಿಗೂ ಬಾರದೇ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಇತ್ತ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಸಹೋದರ, ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಅವರು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲವೇ ಇಲ್ಲ. ನಮ್ಮ ಪಕ್ಷದಲ್ಲೇ ರಮೇಶ್ ಮುಂದುವರಿಯುತ್ತಾರೆ, ನಮಗೆ ಅವರು ಸಿಕ್ಕಿಲ್ಲ. ರಮೇಶ್ ಅವರು ಇಂದು ಸಿಗುತ್ತಾರೆ ಅವರೊಂದಿಗೆ ಮಾತನಾಡುತ್ತೇನೆ. ಪಕ್ಷದ ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರನ್ನ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ನಾವೇನು ಮಾಡೋಕೆ ಬರುತ್ತೆ:
ಇದೇ ವೇಳೆ ಗೋಕಾಕ್ ನಗರಸಭೆ ಸದಸ್ಯರು ರಾಜೀನಾಮೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸದಸ್ಯರು ಕೂಡ ರಾಜೀನಾಮೆ ಕೊಡುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಅವಶ್ಯಕತೆ ಇದೆ. ಒಂದು ವೇಳೆ ಅವರು ರಾಜೀನಾಮೆ ಕೊಟ್ಟರೆ ನಾವೇನು ಮಾಡೋಕೆ ಬರುತ್ತೆ. ಅವರು ನಮ್ಮ ಪಕ್ಷದ ಪರವಾಗಿ ಇದ್ದಾರೆ. ರಮೇಶ್ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲೇ ಮುಂದುವರಿಯುತ್ತೇವೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv