ತುಮಕೂರು: ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದೇ ಪಶ್ಚಿಮಘಟ್ಟಕ್ಕೆ ಸೇರಿದ ಅಘನಾಶಿನಿ ನದಿ ನೀರಿನ ಯೋಜನೆಯ ಪ್ರಸ್ತಾವನೆಯನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕನ್ನಡದಲ್ಲಿ ಹರಿಯುವ ಅಘನಾಶಿನಿ ನದಿಯ ಸುಮಾರು 50-60 ಟಿಎಂಸಿ ನೀರನ್ನು ಬೆಂಗಳೂರಿಗೆ ಹರಿಸಬಹುದು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅಘನಾಶಿನಿ ನದಿಯಿಂದ ನೀರು ತರುವ ಯೋಜನೆಗೆ ಸರಿಸುಮಾರು 10-12 ಸಾವಿರ ಕೋಟಿ ರೂ. ಖರ್ಚಾಗಬಹುದು. ಈ ಯೋಜನೆ ಅನುಷ್ಠಾನಗೊಂಡರೆ ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ನಗರಕ್ಕೆ ಅನುಕೂಲ ಆಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈಗಾಗಲೇ ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಯೋಜನೆಗೆ ಮಲೆನಾಡು ಜನರು ಹಾಗೂ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಮವಾರದಂದು ಸ್ವತಃ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಕೂಡ ಈ ಯೋಜನೆಯನ್ನು ವಿರೋಧಿಸಿ, ಬೆಂಗಳೂರು ಬೆಳೆಯುವುದನ್ನ ನಿಲ್ಲಿಸಿ, ಉತ್ತರ ಕರ್ನಾಟಕವನ್ನು ಬೆಳೆಸಿ. ಇಲ್ಲಿ ಸಾಕಷ್ಟು ನದಿಗಳಿವೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದರು.
ಅಷ್ಟೇ ಅಲ್ಲದೆ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಯಿಂದ ಅಪಾರ ಪರಿಸರ ನಾಶವಾಗುತ್ತದೆ. ಅದ್ದರಿಂದ ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜುಲೈ 10 ರಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಸಭೆ ಶಿವಮೊಗ್ಗ ಬಂದ್‍ಗೆ ಕರೆ ನೀಡಿದೆ.
ಶನಿವಾರ ಜಿಲ್ಲೆಯ ನೌಕರರ ಭವನದಲ್ಲಿ ತಾಲೂಕು ಒಕ್ಕೂಟದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಶಿವಮೊಗ್ಗದ ವಿವಿಧ ಸಂಘ, ಸಂಸ್ಥೆಗಳ ಮತ್ತು ಜನಪ್ರತಿನಿಧಿಗಳು ಸೇರಿ ಈ ಯೋಜನೆ ಜಾರಿ ಆದರೆ ಮಲೆನಾಡಿನ ಜನರಿಗೆ ತೊಂದರೆಯಾಗುತ್ತದೆ ಎಂದು ಈ ತೀರ್ಮಾನ ಕೈಗೊಂಡಿದೆ.