– 14 ಜನ ಶಾಸಕರನ್ನು ಅನರ್ಹ ಮಾಡಿದ್ದು ಪಕ್ಷಕ್ಕೆ ಲಾಸ್
ಬೆಂಗಳೂರು: ಇನ್ನು ಎಷ್ಟು ದಿನ ಅಂತ ಟೋಪಿ ಹಾಕುತ್ತಿರಾ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಿಮ್ಮ ಪಕ್ಷದ ಅಧ್ಯಕ್ಷರು ಯಾಕೆ ಪಕ್ಷ ಬಿಟ್ಟು ಹೋದರು? 3 ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದವರು 80 ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿ ಕಿಡಿಕಾರಿದರು.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಟ್ವೀಟ್ ಮಾಡಿ ನಾನು ಮಾತನಾಡಲ್ಲ ಅಂತ ಹೇಳಿದ್ದರು. ಈಗ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ನೇರವಾದಿ, ಒರಟು ಸ್ವಾಭಾವದವರು. ಆದರೆ ಬೆನ್ನಿಗೆ ಚೂರಿ ಹಾಕುವವರಲ್ಲ. ಜೆಡಿಎಸ್‍ನಲ್ಲಿ ಇದ್ದಾಗಿನಿಂದ ನಾನು ಅವರನ್ನ ನೋಡಿದ್ದೇನೆ ಎಂದು ಹೇಳಿದರು.
Advertisement
Advertisement
ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಉಪ ಚುನಾವಣೆ ದೃಷ್ಟಿ ಇಟ್ಟುಕೊಂಡು ಜೆಡಿಎಸ್‍ನವರು ಹೀಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಈಗ ಎರಡೇ ಪಕ್ಷದ ಚರ್ಚೆಗಳು ಆಗುತ್ತಿವೆ. ಹೀಗಿರುವಾಗ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ಸಿದ್ದರಾಮಯ್ಯನವರು ಹೀಗೆ ಅಂತ ಗೊತ್ತಿದ್ದರೂ ಯಾಕೆ ಅವರ ಜೊತೆ ಸೇರಿಕೊಂಡ್ರಿ? ವಿಧಾನಸಭಾ ಚುನಾವಣೆ ವೇಳೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡ್ರಿ. ಹೀಗಾಗಿ 25 ಸ್ಥಾನ ನಿಮಗೆ ಬಂತು. ಆಮೇಲೆ ನಮ್ಮ ಜೊತೆ ಬಂದು ಸರ್ಕಾರ ಮಾಡಿದ್ರಿ. ನೀವು ಬಿಜೆಪಿಗೆ ಮೋಸ ಮಾಡಿಲ್ವಾ? ಬಿಜೆಪಿ ಜೊತೆ ನಿಮಗೆ ಮಾತುಕತೆ ಆಗಿತ್ತು. ಆಮೇಲೆ ಯಾಕೆ ನೀವು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ರಿ. ನೀವು ಮಾಡಿದ್ದು ಸರಿನಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.
ನಿಮ್ಮಿಂದ ಆದ ಎಲ್ಲಾ ಕಷ್ಟ ಸಹಿಸಿಕೊಂಡು ಸಿದ್ದರಾಮಯ್ಯ ಅವರು 14 ತಿಂಗಳು ಸರ್ಕಾರ ನಡೆಸಿದರು. ಇದು ಅವರಿಗೆ ನೀವು ಕೊಡುತ್ತಿರುವ ಬಳುವಳಿನಾ? ನಾನು ಒಕ್ಕಲಿಗನಾಗಿ ಹೇಳುತ್ತಿದ್ದೇನೆ. ನಿಮ್ಮ ಪಕ್ಷ ಸಂಘಟನೆ ಬಗ್ಗೆ ಮಾತನಾಡಿಕೊಳ್ಳಿ. ಅದು ಬಿಟ್ಟು ಸಿದ್ದರಾಮಯ್ಯ ವಿರುದ್ಧ ಮಾತನಾಡಬೇಡಿ ಎಂದು ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಚಿವ ವರದೇಗೌಡ ಅವರ ಕಥೆ ಏನಾಯಿತು? ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ವರದೇಗೌಡರು ಕಷ್ಟ ಪಟ್ಟರು. ಅವರ ಕುಟುಂಬ ಈಗ ರಾಜಕೀಯವಾಗಿ ಎಲ್ಲಿದೆ? ನಿಮ್ಮ ಕುಟುಂಬ ಬಿಟ್ಟು ಬೇರೆ ಯಾವ ಒಕ್ಕಲಿಗರನ್ನ ಬೆಳೆಸಿದ್ದೀರಾ ಹೇಳಿ? ಆದರೂ ಒಕ್ಕಲಿಗ ಸಮಾಜ ನಿಮ್ಮ ಕುಟುಂಬದ ಜೊತೆಯೇ ಇದೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
14 ಜನ ಶಾಸಕರನ್ನು ಅನರ್ಹ ಮಾಡಿದ್ದು ನಮ್ಮ ಪಕ್ಷಕ್ಕೆ ಲಾಸ್ ಆಗಿದೆ. ಲೋಕಸಭೆ ಚುನಾವಣೆ ಬಳಿಕ ಹೈಕಮಾಂಡ್ ಜೊತೆ ಮಾತನಾಡಿ ಬೆಂಬಲ ವಾಸಪ್ ಪಡೆಯಬೇಕು ಅಂತ ಸಿದ್ದರಾಮಯ್ಯ ಇದ್ದರು. ಆದರೆ ಚುನಾವಣೆ ಫಲಿತಾಂಶದಿಂದಾಗಿ ಹೈಕಮಾಂಡ್ ಮೇಲೆ ಒತ್ತಡ ಹಾಕುವುದಕ್ಕೆ ಅವರಿಗೆ ಆಗಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹಿರಿಯ ಜೊತೆ ಮಾತನಾಡಿ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಬೇಕು ಎಂದು ಹೇಳಿದರು.