ಹಾಸನ: ಹಾಸನ ಜಿಲ್ಲೆಯಲ್ಲಿ ಬ್ರಿಟೀಷರ ಆಡಳಿತದಂತೆ ಅಧಿಕಾರ ನಡೆಯುತ್ತಿದೆ. ಹೀಗಾಗಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.
ಹಾಸನದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್.ಡಿ.ದೇವೇಗೌಡರ ವಿರುದ್ಧವೇ ನಾನು 4.9 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದೆ. ಈಗ ಅಹಿಂದ ವರ್ಗದ ಜೊತೆಗೆ ಸೇರಿ ಕುಟುಂಬ ರಾಜಕಾರಣ ಕೊನೆಗಾಣಿಸಲು ತೀರ್ಮಾನ ಮಾಡಿದ್ದೇನೆ. ಅಧಿಕಾರ ಶಾಶ್ವತವಲ್ಲ. ಹೀಗಾಗಿ ಅಧಿಕಾರದಲ್ಲಿ ಇರುವಾಗ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ದೇವೇಗೌಡರು ಇಲ್ಲಿನ ಜನರಿಂದ ವೋಟ್ ಮಾತ್ರ ಹಾಕಿಸಿಕೊಳ್ಳುತ್ತಾರೆ. ಆದರೆ ಅಧಿಕಾರವನ್ನು ಮಕ್ಕಳು ಮೊಮ್ಮಕ್ಕಳು, ಸೊಸೆಯಂದಿರು, ಬೀಗರಿಗೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕೊಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಕೊಡಬಹುದಿತ್ತು. ರಾಜಕೀಯವಾಗಿ ಇವರನ್ನು ತೆಗೆದು ಹಾಕಿದರು ಎಲ್ಲಾ ಪಕ್ಷಗಳ ಕೆಳಹಂತದ ನಾಯಕರು ಉಳಿಯುತ್ತಾರೆ ಎಂದ ಅವರು, ನಾನು ಸ್ಪರ್ಧಿಸದಂತೆ ದೊಡ್ಡ ದೊಡ್ಡವರಿಂದ ಒತ್ತಡ ಹಾಕಿಸಿದರು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ. ಬೆಂಗಳೂರು ಉತ್ತರ ಲೋಕಸಭಾ ಟಿಕೆಟ್ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು. ಆದರೆ ನಾನು ಒಪ್ಪಿಲ್ಲ. ಜಿಲ್ಲೆಯ ಜನರ ಪರವಾಗಿ ಹೋರಾಟ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.
Advertisement
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.