ಹಾಸನ: ಕಾಂಗ್ರೆಸ್ – ಜೆಡಿಎಸ್ ನಾಯಕರು ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿಕೆ ನೀಡುತ್ತಿದ್ದರೆ, ಇತ್ತ ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಗುರುತಿಸಿಕೊಂಡಿರುವ ರೇವಣ್ಣ ವಿರುದ್ಧ ಮಾಜಿ ಸಚಿವ, ಕೈ ನಾಯಕ ಎ ಮಂಜು ಭೂ ಕಬಳಿಕೆಯ ಗಂಭೀರ ಆರೋಪ ಮಾಡಿದ್ದಾರೆ.
ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ತಮ್ಮ ಪ್ರಭಾವ ಬಳಸಿ ತಮ್ಮ ಮಗನ ಹೆಸರಿಗೆ ಭೂಮಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಎ ಮಂಜು ದಾಖಲೆ ಬಿಡುಗಡೆ ಮಾಡಿದ್ದಾರೆ.
Advertisement
Advertisement
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಎ ಮಂಜು ಅವರು, ಜಿಲ್ಲೆಯ ದುದ್ದ ಹೋಬಳಿ ಸೋಮನಹಳ್ಳಿ ಕಾವಲ್ ಪ್ರದೇಶದಲ್ಲಿ ನಿಯಮ ಮೀರಿ ಭೂಮಿಯನ್ನು ಎಚ್ ರೇವಣ್ಣ ಅವರು ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.
Advertisement
ಸರ್ಕಾರಿ ದಾಖಲೆಗಳನ್ನು ನಿಯಮಗಳ ವಿರುದ್ಧವಾಗಿ ತಿದ್ದಿ ಸುಮಾರು 54.29 ಎಕರೆ ಭೂಮಿಯನ್ನು ದುರುಪಯೋಗ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿಯಾಗಿದ್ದ ವೇಳೆ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಭೂಮಿ ಕಬಳಿಸಲಾಗಿದೆ. ಈ ಕುರಿತ ಎಲ್ಲಾ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸಬೇಕು. ಸರ್ಕಾರಿ ಭೂಮಿಯನ್ನು ತಮ್ಮ ಹೆಸರಿಗೆ ಹಾಗೂ ಬೇಕಾದವರಿಗೆ ಮಾಡಿದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
Advertisement
ಪ್ರಭಾವಿ ರಾಜಕಾರಣಿಗಳೇ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಅನುಕೂಲಕ್ಕೆ ಮಾಡಿಕೊಳ್ಳುವುದಾದರೆ ಸಾಮಾನ್ಯ ಜನರ ಸ್ಥಿತಿ ಏನು? ಸರ್ಕಾರಿ ಭೂಮಿ ಮತ್ತೆ ಸರ್ಕಾರದ ಸುಪರ್ದಿಗೆ ಬರಬೇಕು. ಭೂಮಿ ಯಾರಿಗೆ ಮಂಜೂರು ಆಗದಿದ್ದರೂ ಕೂಡ ಅದು ಹೇಗೆ ಬೇರೆಯವರಿಗೆ ಪರಭಾರೆ ಆಗಿದೆ ಎಂಬುವುದರ ಬಗ್ಗೆ ತನಿಖೆ ನಡೆಸಬೇಕು ಎಂದರು.
ಏನಿದು ಆರೋಪ?
ಹಾಸನ ಜಿಲ್ಲೆಯ ದುದ್ದ ಹೋಬಳಿ ಬಳಿ ಇದ್ದ ಸರ್ಕಾರದ ಭೂಮಿಯನ್ನು ಸಣ್ಣೇಗೌಡ ಎಂಬವರು ಗಿರಿಯಪ್ಪ ಎಂಬವರಿಗೆ ಮಾರಾಟ ಮಾಡಿದ್ದಾರೆ. ಆದರೆ ಅದು ಸರ್ಕಾರಿ ಭೂಮಿಯಾಗಿದ್ದು ಸಣ್ಣೇಗೌಡ ಹೆಸರಿಗೆ ಸರ್ಕಾರ ಭೂಮಿ ಮಂಜೂರು ಆಗದೇ ಇದ್ದರೂ ಆತ ಹೇಗೆ ಮಾರಾಟ ಮಾಡಿದ್ದಾನೆ ಎಂದು ಪ್ರಶ್ನಿಸಿದರು. ಬಳಿಕ ವಿವಿಧ ಹೆಸರಿಗಳಲ್ಲಿ ನೋಂದಣಿ ಮಾಡಿಸಿದ ಭೂಮಿಯನ್ನು ಅಧಿಕಾರ ಬಳಸಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮೂಲಕ ಗಿರಿಯಪ್ಪನಿಂದ ಪ್ರಜ್ವಲ್ ರೇವಣ್ಣ ಹೆಸರಿಗೆ ಭೂಮಿ ಹಕ್ಕು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳ ಲೋಪವೂ ಇದೆ ಎಂದು ಎ ಮಂಜು ಆರೋಪಿಸಿದರು.
ಇದೇ ವೇಳೆ ಹಾಸನ ತಾಲೂಕಿನ ಕಸಬಾ ಹೋಬಳಿಯ ರಾಂಪುರ, ದೊಡ್ಡಕುಂಡಗೋಳ, ನಿಡುಡಿ ಗ್ರಾಮಗಳಲ್ಲಿ ಸದ್ಯ ಸುಮ್ಮನೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಸರ್ವೆ ಮಾಡಲು ಯಾವುದೇ ಆದೇಶ ನೀಡಿಲ್ಲ. ಸುಮ್ಮನೆ ಸರ್ವೆ ಮಾಡಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಇರುವುದರಿಂದ ಈ ರೀತಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಈ ಭೂ ಅವ್ಯವಹಾರದ ಕುರಿತು ಅಂತ್ಯ ಕಾಣುವವರೆಗೂ ನಿರಂತರವಾಗಿ ಹೋರಾಡುತ್ತೇನೆ ಎಂದು ತಿಳಿಸಿದ ಎ ಮಂಜು ಅವರು, ನಾನು ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದು, ಅಲ್ಲಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ನಾನು ಹೋಗುವುದಿಲ್ಲ. ಈ ರೀತಿಯ ಅನ್ಯಾಯವಾದಗ ಹೇಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv