– ಇಷ್ಟೊಂದು ಪ್ರವಾಹ ನಾನು ನೋಡಿಲ್ಲ
– ಕೇಂದ್ರ 5 ಸಾವಿರ ಕೋಟಿ ವಿಶೇಷ ಅನುದಾನ ಕೊಡಬೇಕು
– ಸಿಎಂ ಬಿಎಸ್‍ವೈ ವಿರುದ್ಧ ಕಿಡಿ
– ನನ್ನ ಕ್ಷೇತ್ರಕ್ಕೆ ಬೆಡ್‍ಶೀಟ್ ಕೊಟ್ಟಿಲ್ಲ
ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಕೇಂದ್ರ ಸರ್ಕಾರಕ್ಕೆ ಗಂಭೀರತೆ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಪ್ರವಾಹ ಪೀಡಿತವಾದ ಸ್ಥಳಗಳಿಗೆ ಭೇಟಿ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಮಾನಿಕ ಸಮೀಕ್ಷೆ ಮಾಡಿ ಹೋಗಿದ್ದಾರೆ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕಿತ್ತು. ಆದರೆ ಕೇಂದ್ರ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಪ್ರಧಾನಿ ಅವರೇ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಆದರೆ ಮೋದಿ ಇನ್ನೂ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಬರುತ್ತಾರೆ. ಶಾ, ನಿರ್ಮಲಾ ಬರುವುದರಿಂದ ಗಂಭೀರತೆ ಬರಲ್ಲ. ಕೇಂದ್ರ ಸರ್ಕಾರಕ್ಕೆ ಗಂಭೀರತೆ ಇದ್ದರೆ ಮೋದಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡಬೇಕು. ಇದು ನನ್ನ ಆಗ್ರಹ ಎಂದರು.
Advertisement
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಬಂದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ 17 ಜಿಲ್ಲೆಗಳು ಜಲಾವೃತವಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆ ಆಗಿದ್ದು ನಮಗೆ ಪ್ರವಾಹ ಆಗಲು ಕಾರಣವಾಗಿದೆ. 6.5 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಮ್ ನಿಂದ ಹೊರ ಬಿಡುತ್ತಿದ್ದಾರೆ. ಇಷ್ಟು ನೀರು ಹೊರ ಬಿಟ್ಟಿರೋದು ಇದೇ ಮೊದಲು. ನಾನು ಇಷ್ಟು ನೀರು ಬಿಟ್ಟಿದ್ದು ನೋಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
Advertisement
ಕೇಂದ್ರ ಸರ್ಕಾರ ತಕ್ಷಣ 5 ಸಾವಿರ ಕೋಟಿ ರೂ.ವನ್ನು ವಿಶೇಷ ಅನುದಾನವೆಂದು ಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು 6 ಸಾವಿರ ಕೋಟಿ ನಷ್ಟ ಎಂದು ಹೇಳಿದ್ದಾರೆ. ನನ್ನ ಪ್ರಕಾರ 1 ಲಕ್ಷ ಕೋಟಿ ನಷ್ಟ ಆಗಿದೆ. 10 ಲಕ್ಷ ಎಕರೆ ಬೆಳೆ ನಾಶ ಆಗಿದೆ. ಜಾನುವಾರು, ರಸ್ತೆ, ರೈಲ್ವೇ ಹಳಿ ಕುಸಿದಿವೆ. ಜಾನುವಾರುಗಳು ಕೊಚ್ಚಿ ಹೋಗಿವೆ. ಸರ್ಕಾರದ, ಖಾಸಗಿ ಆಸ್ತಿ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. 15-20 ಜನ ನಾಪತ್ತೆ ಆಗಿದ್ದಾರೆ. 25-30 ಜನ ಸತ್ತಿದ್ದಾರೆ ಅನ್ನೋ ರೀತಿಯಲ್ಲಿ ಸರ್ಕಾರ ಹೇಳುತ್ತಿದೆ. ಇಷ್ಟು ಪ್ರಮಾಣದಲ್ಲಿ ದೊಡ್ಡ ಪ್ರವಾಹ ಹಿಂದೆ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ನಾನು ವಿಪಕ್ಷ ನಾಯಕನಾಗಿದ್ದಾಗ ಪ್ರವಾಹ ಆಗಿತ್ತು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ಆಗ ನಾವು ಅಂದಿನ ಪ್ರಧಾನಿಗೆ ಒತ್ತಾಯ ಮಾಡಿದ್ದೆವು. ಹೀಗಾಗಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಬಂದು ಭೇಟಿ ಕೊಟ್ಟಿದ್ದರು. ಮನಮೋಹನ್ ಸಿಂಗ್ ಅವರು ವೈಮಾನಿಕ ಸಮೀಕ್ಷೆ ಮಾಡಿ 1600 ಕೋಟಿ ಸ್ಥಳದಲ್ಲೇ ಕೊಟ್ಟಿದ್ದರು. ಈಗಿನ ಸರ್ಕಾರ ಎನ್‍ಡಿಆರ್‍ಎಫ್ ನಿಂದ 126 ಕೋಟಿ ಕೊಟ್ಟಿದ್ದಾರೆ ಎಂದು ಕೇಂದ್ರದ ವಿರುದ್ಧ ಗರಂ ಆದರು.
ಸಿಎಂ ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಅವರದ್ದೇ ಸರ್ಕಾರ ಇದೆ. 25 ಜನ ಸಂಸದರು ಇದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚು ಹಣ ಬಿಡುಗಡೆ ಮಾಡಿಸಬೇಕು. ಕೇಂದ್ರ ಸರ್ಕಾರ NDRF ಹಣ ಬಿಟ್ಟು ಬೇರೆ ಹಣ ಕೊಟ್ಟಿಲ್ಲ. ಕೂಡಲೇ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಏನೂ ಆಗಿಲ್ಲ ಅನ್ನೋ ರೀತಿ ವರ್ತನೆ ಮಾಡುತ್ತಿದೆ. ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕೇವಲ ಎಮೋಷನ್ ವಿಚಾರದಲ್ಲಿ ರಾಜಕೀಯ ಮಾಡೋಕೆ ಆಗಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ನವಿಲು ತೀರ್ಥ ಡ್ಯಾಂ ತುಂಬಿದೆ. ನನ್ನ ಕ್ಷೇತ್ರದ ಅನೇಕ ಹಳ್ಳಿಗಳೂ ಮುಗಿದೆ. ಪಟ್ಟದ ಕಲ್ಲಿನಲ್ಲಿ 10-15 ಜನ ಸಿಕ್ಕಿ ಹಾಕಿಕೊಂಡಿದ್ದಾರೆ. ಏರ್ ಲಿಫ್ಟ್ ಮಾಡಿಸಿ ಎಂದು ಹೇಳಿದ್ರೂ ಮಾಡೋಕೆ ಆಗಲಿಲ್ಲ. ನಾನು ಜಿಲ್ಲಾಧಿಕಾರಿಗೆ ಬೈದು ದೋಣಿ ಮೂಲಕ ಅವರನ್ನು ರಕ್ಷಣೆ ಮಾಡಿದೆವು. ಅಮಿತ್ ಶಾ ಹೋಂ ಮಿನಿಸ್ಟರ್ ಇದ್ದಾರೆ, ಇನ್ನೂ ಸ್ವಲ್ಪ ಹೆಲಿಕಾಪ್ಟರ್ ಕಳುಹಿಸಬೇಕು. ಡಿಸಿ ಕೂಡ ಹೆಲಿಕಾಪ್ಟರ್ ಕಳುಸುತ್ತಿಲ್ಲ ಎಂದು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಇಲ್ಲದಂತೆ ಆಗಿದೆ. ಇನ್ನೂ ಹೆಚ್ಚು ಗಂಜಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕು. ಬಾದಾಮಿ ಬಗ್ಗೆ ನಿತ್ಯ ಮಾಹಿತಿ ಪಡೆಯುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಬೆಡ್ ಶೀಟ್ ಕೊಟ್ಟಿಲ್ಲ. ಔಷಧಿ ಪೂರೈಕೆ ಇನ್ನೂ ಆಗಿಲ್ಲ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಸರ್ಕಾರಿ, ಖಾಸಗಿ ವೈದ್ಯರನ್ನು ಸರ್ಕಾರ ಬಳಸಿಕೊಳ್ಳಬೇಕು. ಜನರಿಗೆ ಆಹಾರ, ಬೆಡ್ ಶೀಟ್, ಕನಿಷ್ಟ ಸೌಲಭ್ಯ ಒದಗಿಸುವ ಕೆಲಸ ಆಗಬೇಕು. ಜಾನುವಾರುಗಳಿಗೆ ಅಗತ್ಯ ವ್ಯವಸ್ಥೆ ಕೂಡಲೇ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಸಂತ್ರಸ್ತರ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ನಮ್ಮ ಕಾಂಗ್ರೆಸ್ ನಿಂದ ಎರಡು ತಂಡ ಹೋಗಿದೆ. ಸಂತ್ರಸ್ತರ ಕೇಂದ್ರದಲ್ಲಿ ಸೌಲಭ್ಯವಿಲ್ಲ ಎಂಬ ಮಾಹಿತಿ ಬಂದಿದೆ. ಕೂಡಲೇ ಪರಿಹಾರ ಕಾರ್ಯ ಮಾಡಬೇಕು. ಪ್ರಧಾನಿ ನಾಳೆ, ನಾಡಿದ್ದರಲ್ಲೇ ರಾಜ್ಯಕ್ಕೆ ಬರಬೇಕು. ಇನ್ನೂ ರಾಜ್ಯ ಸರ್ಕಾರ ರಿಪೋರ್ಟ್ ಕೇಂದ್ರಕ್ಕೆ ಕಳಿಸಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಪ್ರಹ್ಲಾದ್ ಜೋಷಿ ವರದಿ ಬಂದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಸಿಎಂ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ 5 ಸಾವಿರ ಕೋಟಿ ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಹೆಚ್ಚು ಹೆಲಿಕಾಪ್ಟರ್ ಗಳನ್ನು ಕಳುಹಿಸಿ ಕೊಡಬೇಕು ಎಂದರು.
ಕೇರಳ, ಮಹಾರಾಷ್ಟ್ರಕ್ಕೆ ಕೇಂದ್ರ ಹಣ ಕೊಟ್ಟಿದೆ. ಆದರೆ ರಾಜ್ಯಕ್ಕೆ ಇನ್ನೂ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡಬಾರದು. 25 ಜನ ಸಂಸದರನ್ನ ಬಿಜೆಪಿಗೆ ಕೊಟ್ಟಿದೆ. ಯಡಿಯೂರಪ್ಪಗೆ ಅಹವಾಲು ಕೇಳಿದ್ದಕ್ಕೆ ಲಾಠಿಚಾರ್ಜ್ ಮಾಡಿಸಿದ್ದಾರೆ. ಲಾಠಿಚಾರ್ಜ್ ಮಾಡಿಸೋದ್ರಲ್ಲಿ ಯಡಿಯೂರಪ್ಪ ನಿಸ್ಸೀಮರು. ಈ ಹಿಂದೆ ಗೋಲಿಬಾರ್ ಮಾಡಿಸಿದ್ದರು. ಹಸಿರು ಶಾಲು ಹಾಕಿಕೊಳ್ತಾರೆ. ಜನ ಕಷ್ಟ ಹೇಳಿದ್ದಕ್ಕೆ ಲಾಠಿಚಾರ್ಜ್ ಮಾಡಿಸಿದ್ದಾರೆ. ಇವರಿಗೆ ಮನುಷ್ಯತ್ವ ಇದೆಯಾ? ಕೂಡಲೇ ಯಡಿಯೂರಪ್ಪ ಪ್ರಧಾನಿ ಮನವರಿಕೆ ಮಾಡಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡಿಸಬೇಕು. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಆಗಬೇಕು ಎಂದರು ಆಗ್ರಹಿಸಿದರು.