– ಏಕವಚನದಲ್ಲೇ ಮಾಜಿ ಸಿಎಂ ತಿರುಗೇಟು
ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ವಿಶ್ವನಾಥ್ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತನಾಡಿದ್ದಾರೆ.
ಮೈತ್ರಿ ಮುನ್ನಡೆಸುವಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂಬ ಎಚ್. ವಿಶ್ವನಾಥ್ ಆರೋಪ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.
ನೆಟ್ಟಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನಿರ್ವವಣೆ ಮಾಡಲು ಅವನ ಕೈಲಿ ಆಗಲಿಲ್ಲ. ಅವರೇನ್ರಿ, ನಮ್ಮ ಬಗ್ಗೆ ಮಾತನಾಡೋದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು 6 ತಿಂಗಳು ನಿರ್ವಹಿಸದೇ ರಾಜೀನಾಮೆ ಕೊಟ್ಟಿದ್ದಾನೆ. ಅವನ ಮಾತಿಗೆ ಏನಂಥ ಪ್ರತಿಕ್ರಿಯೆ ಕೊಡೋದು ಎಂದು ತಿಳಿಸಿದ್ದಾರೆ.
ವಿಶ್ವನಾಥ್ ಹೇಳಿದ್ದೇನು..?
ಬುಧವಾರ ದೆಹಲಿಯಲ್ಲಿ ಮಾತನಾಡಿದ್ದ ಎಚ್ ವಿಶ್ವನಾಥ್, ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದನ್ನು ಟಿವಿಯಲ್ಲಿ ನೋಡಿದ್ದೇನೆ. ಮೈತ್ರಿ ಸರ್ಕಾರ ಪ್ರಯೋಗವಿದ್ದಂತೆ ಅದನ್ನು ನಿಭಾಯಿಸುವುದು ರಾಜಕೀಯ ಚತುರತೆ. ಈ ಪ್ರಯೋಗ ಯಶಸ್ವಿ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನ ಮಾಡುತ್ತಿಲ್ಲ. ಮೈತ್ರಿ ನಿಭಾಯಿಸುವಲ್ಲಿ ರಾಜ್ಯ ನಾಯಕರು ವಿಫಲವಾಗಿದ್ದು, ರಾಷ್ಟ್ರ ರಾಜಕಾರಣದ ಮುಂದೆ ರಾಜ್ಯ ನಾಯಕರು ಬೆತ್ತಲಾಗಿದ್ದಾರೆ ಬೇಸರ ವ್ಯಕ್ತಪಡಿಸಿದ್ದರು.
ಮೈತ್ರಿ ಸರ್ಕಾರ ನಿಭಾಯಿಸುವ ಸಾಮರಸ್ಯ ಇಲ್ಲ. ರಾಷ್ಟ್ರದ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಿಎಂ ಇಬ್ಬರೂ ವಿಫಲರಾಗಿದ್ದಾರೆ ಎಂದು ಸಿಎಂ ಮತ್ತು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದರು.