ಮೈಸೂರು: ಕೆಲಸ ಕೊಡಿಸಿ ಎಂದು ಕೇಳಿಕೊಂಡು ಬಂದ ಯುವತಿಯನ್ನು ನಗುತ್ತಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ ಪ್ರಸಂಗ ನಡೆಯಿತು.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಪೋರೇಟರ್ ಮಗಳು, ನನಗೆ ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಈ ವೇಳೆ ಸಿದ್ದರಾಮಯ್ಯ ಅವರು ನೀನು ಮದುವೆಯಾಗಲ್ವಮ್ಮ ಎಂದು ನಗುತ್ತಲೇ ಪ್ರಶ್ನಿಸಿದ್ದಾರೆ. ಈ ವೇಳೆ ಯುವತಿ ಮದುವೆಯಾಗುತ್ತೇನೆ, ಈಗ ನನಗೆ ವಿಎ ಕೆಲಸ ಕೊಡಿಸಿ ಎಂದು ಕೇಳಿಕೊಂಡಿದ್ದಾಳೆ.
ಆಗ ಸಿದ್ದರಾಮಯ್ಯ ಅವರು ವಿಎ ಪೋಸ್ಟ್ ನೇರ ನೇಮಕಾತಿಯಾಗಿರುತ್ತದೆ. ಅದಕ್ಕೆ ಹೆಚ್ಚು ಮಾಕ್ರ್ಸ್ ಪಡೆದಿರಬೇಕು. ನಿನಗಿಂತ ಹೆಚ್ಚು ಬೇರೆಯವರಿಗೆ ಇದ್ದರೆ ಅವರಿಗೆ ಸಿಗುತ್ತದೆ. ನೀನು ಕೆ.ಎ.ಎಸ್ ಎಕ್ಸಾಂಗೆ ತಯಾರಿ ಮಾಡಿಕೋ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ನೀಡಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಡಿಕೆಶಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಅರ್ಜಿ ಹೈಕೋರ್ಟಿನಲ್ಲಿ ವಜಾ ಆಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ. ಯಾರು ಅಧಿಕಾರ ದುರುಪಯೋಗ ಮಾಡುವಂತ ಕೆಲಸ ಮಾಡಬಾರದು. ಅಧಿಕಾರ ದುರುಪಯೋಗವಾಗುವಂತಹ ಕೆಲಸವಾಗುತ್ತಿದೆ ಎಂದು ಅನಿಸುತ್ತಿದೆ ಎಂದರು.
ಚಿದಂಬರಂ ಅವರನ್ನು ಅರೆಸ್ಟ್ ಮಾಡುವಂತ ಕೇಸಲ್ಲ. ನ್ಯಾಚುರಲ್ ಜಸ್ಟಿಸ್ ಇರಬೇಕು. ಅದು ಕಾಣೆಯಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.