ಬೆಂಗಳೂರು: ಅಂದು ಬಿಎಸ್ ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಹೋಗಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ನಗರದ ಜೆ.ಪಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಬಿಜೆಪಿ ವಿರುದ್ಧ ಪ್ರಾಮಾಣಿಕವಾಗಿ ಹೋರಾಟ ಮಾಡಲು ಮುಂದಾದಾಗ ಅದಕ್ಕೆ ಅಡಚಣೆ ಉಂಟು ಮಾಡೋ ಶಕ್ತಿಗಳು ಜಾಸ್ತಿ ಇವೆ. ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಕೆಜೆಪಿ ಮಾಡದೇ ಇದ್ದಿದ್ದರೆ ಕಾಂಗ್ರೆಸ್ 2013 ರಲ್ಲಿ ಎಲ್ಲಿ ಇರುತಿತ್ತು ಎಂದು ನನಗೆ ಗೊತ್ತು. ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿಯಾಗಲು ಸಾಧ್ಯವಿರಲಿಲ್ಲ. ಅವರಿಗೆ ಇನ್ನೊಂದು ಪಕ್ಷದ ಬೆಂಬಲ ಬೇಕಿತ್ತು. ಹೀಗಾಗಿ ಯಡಿಯೂರಪ್ಪ ಪಕ್ಷ ಬಿಟ್ಟು ಹೋದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಂದರು.
Advertisement
Advertisement
ಇದೇ ವೇಳೆ ಬರುವ ಏಪ್ರಿಲ್ ನಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಎಚ್‍ಡಿಕೆ, ಸಿದ್ದರಾಮಯ್ಯ ಅವರು ಹೇಳಿದಂತೆ ಏನು ಆಗಲ್ಲ. ಎಲ್ಲರಿಗಿಂತ ದೊಡ್ಡವರು ಅನ್ನೋ ಸಿದ್ದರಾಮಯ್ಯನವರ ಮನೋಸ್ಥಿತಿ ಹಾಗೆ ಇಂದಿನ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.
Advertisement
ಕಾಂಗ್ರೆಸ್ಸಿನವರು ನಾವೇನೋ ಮಾಡಿದ್ದೀವಿ ಅಂತ ಇದ್ದಾರೆ. ಅನ್ನಭಾಗ್ಯ, ಕ್ಷೀರ ಭಾಗ್ಯ ಅಂತಾರೆ. ಅನ್ನಭಾಗ್ಯಕ್ಕೆ ರಾಜ್ಯದ ಪಾಲು ಪ್ರತಿ ವರ್ಷ 600 ಕೋಟಿ ಮಾತ್ರ. ಕ್ಷೀರ ಭಾಗ್ಯ ಬಿಜೆಪಿ ಸರ್ಕಾರ ಇದ್ದಾಗ ಬಂದ ಯೋಜನೆ. ಆಗ 2 ರೂ. ಇತ್ತು, ಕಾಂಗ್ರೆಸ್ಸಿನವರು 5 ರೂ. ಮಾಡಿದ್ರು, ನಾನು 6 ರೂ. ಮಾಡಿದೆ. ನನ್ನ ಸರ್ಕಾರ ರೈತರ ಸಾಲಮನ್ನಾಗೆ 25 ಸಾವಿರ ಕೋಟಿ ಇಟ್ಟಿದೆ. ಅವರು ಹೇಗೆ ಬೆಂಬಲ ಕೊಟ್ರು, ಏನ್ ಮಾಡಿದರು ಎಂದು ಸಮಯ ಬಂದಾಗ ಹೇಳುತ್ತೇನೆ ಎಂದು ಗರಂ ಆದರು.
Advertisement
ಏಪ್ರಿಲ್ ಗೆ ಕಾಂಗ್ರೆಸ್ ಬಂದೇ ಬಿಡ್ತು ಅಂತ ಹೊರಟಿದ್ದಾರೆ. ಜೆಡಿಎಸ್ ಪಕ್ಷ ಮುಗಿಸುತ್ತೇವೆ ಅಂತಾರೆ. ಸ್ವಾಭಿಮಾನಕ್ಕೆ ಜನ ವೋಟ್ ಹಾಕಬೇಕು ಅಂತಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಗೊತ್ತಾಗುತ್ತೆ. ಅಹಂಕಾರದಿಂದ ಹೋದರೆ ಏನು ಪ್ರಯೋಜನ ಇಲ್ಲ. ಯಾರು ಯಾರು ಶಕ್ತಿ ಏನೇನೂ ಅಂತ ಅರ್ಥ ಮಾಡಿಕೊಂಡರೆ ಉತ್ತಮ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟಿದ್ದಾರೆ.