ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

Public TV
2 Min Read
Chaitra Kundapur

ಮಂಗಳೂರು: ಆರೋಪಿ ಸ್ಥಾನದಲ್ಲಿರುವ ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಸಮಗ್ರ ತನಿಖೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಆರೋಪಿ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಚೈತ್ರಾ ಕುಂದಾಪುರ ಕೇಸ್ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು. ಟಿಕೆಟ್ ಕೊಡಿಸ್ತೀವಿ ಅಂತ ಹಣ ಪಡೆದಿರೋದನ್ನ ನಾವು ಗಂಭೀರವಾಗಿ ಪರಿಗಣಿಸ್ತೇವೆ. ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

chaitra kundapura rakshith shetty

ಹಲವರು ಹೋರಾಟ ಮಾಡ್ತಾರೆ, ಹಾಗೆಂದ ಮಾತ್ರಕ್ಕೆ ಅದೆಲ್ಲವೂ ಪಕ್ಷಕ್ಕೆ ಸಂಬಂಧವಿರುತ್ತದೆ ಎಂದಲ್ಲ. ಈ ಪ್ರಕರಣದ ಸಂಪೂರ್ಣ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ವಿಚಾರದಲ್ಲಿ ಇನ್ನೂ ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ. ಸದ್ಯ ಪ್ರಾಥಮಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ನಾಯಕರು ಚರ್ಚಿಸುತ್ತಾರೆ. ಮೈತ್ರಿ ಸಮಯದಲ್ಲಿ ನಮ್ಮೊಂದಿಗೂ ಚರ್ಚಿಸಿ ಅಭಿಪ್ರಾಯ ಕೈಗೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಂದಾಗಿ ಹೆಚ್ಚು ಸೀಟ್ ಪಡೆಯೋದು ನಮ್ಮ ಉದ್ದೇಶ. ಮಾನ್ಸೂನ್ ಪೂರ್ವದ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು, ಬರಗಾಲ ಘೋಷಣೆಯಲ್ಲೂ ವಿಳಂಬ ಮಾಡಿದ್ದಾರೆ. ಸರ್ಕಾರ ವರದಿ ಪಡೆಯುವಲ್ಲಿ ವಿಳಂಬ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

SIDDARAMAIAH

ಈಗ ಮುಂಗಾರು ಹೋಗಿದೆ, ರೈತರಿಗೆ ಸಹಾಯ ಮಾಡಲು ಆಗಲ್ಲ. ಕನಿಷ್ಠ ಬೆಳೆ ನಷ್ಟ ಪರಿಹಾರವಾದ್ರೂ ಸರ್ಕಾರ ಕೊಡಬೇಕು. ನಮ್ಮ ಅವಧಿಯಲ್ಲಿ ಪ್ರವಾಹದ ಒಂದು ತಿಂಗಳಲ್ಲೇ ಪರಿಹಾರ ಕೊಟ್ಟಿದ್ದೇವೆ. ನಾವು ಕೇಂದ್ರದ ಮಾನದಂಡಕ್ಕೂ ಕಾಯಲಿಲ್ಲ, ಇವರು ಕೇಂದ್ರದ ಮಾನದಂಡ ಅಂತಿದ್ದಾರೆ. ಕಷ್ಟದಲ್ಲಿರೋ ಜನರಿಗೆ ಸಹಾಯ ಮಾಡುವ ಮನೋಭಾವ ಸರ್ಕಾರಕ್ಕೆ ಇಲ್ಲ. ಕುಂಟು ನೆಪ ಹೇಳಿಕೊಂಡು ಕಾಲ ದೂಡುತ್ತಿದೆ. ಸುಮಾರು 25 ಸಾವಿರ ಕೋಟಿ ಸಾಲದ ಬದಲು ರೈತರಿಗೆ 7 ಸಾವಿರ ಕೋಟಿ ಅಷ್ಟೇ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂಪರ ಕಾರ್ಯಕರ್ತರ ವಿರುದ್ಧ ಕೇಸ್‌ ಎಂಬ ಆರೋಪಕ್ಕೂ, ಚೈತ್ರಾ ಪ್ರಕರಣಕ್ಕೂ ಸಂಬಂಧ ಇಲ್ಲ: ಜಿ.ಪರಮೇಶ್ವರ್

ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ನಾವು ಹೇಳಿಕೊಂಡು ಬಂದಿದ್ದೇವೆ. ತಮಿಳುನಾಡಿನ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಆದರೂ ರಾಜ್ಯ ಸರ್ಕಾರ ನೀರು ಬಿಡ್ತಾ ಇತ್ತು. ಕಾನೂನಾತ್ಮಕವಾಗಿ ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಕಾವೇರಿ ಜಲಾನಯನ ರೈತರಿಗೆ, ಬೆಂಗಳೂರಿಗೆ ಕಷ್ಟ ಆಗಲಿದೆ. ಇವತ್ತು ಪರಿಹಾರ ಕಾನೂನಾತ್ಮಕ ಮತ್ತು ತಮಿಳುನಾಡನ್ನ ಒಪ್ಪಿಸೋದು. ಆದ್ರೆ ನಮ್ಮ ಸಿಎಂ ತಮಿಳುನಾಡಿನ ಸಿಎಂ ಸ್ಟಾಲಿನ್ ಜೊತೆಗೆ ಮಾತಾಡೋಕೆ ತಯಾರಿಲ್ಲ ಎಂದು ಹೇಳಿದ್ದಾರೆ.

ಐಎನ್‌ಡಿಐಎ ಇಂಡಿಯಾ ಒಕ್ಕೂಟ ಅಂತಾ ಹೇಳ್ತಾರೆ, ಇವರು ನಮ್ಮ ನೀರಿನ ಹಕ್ಕಿನ ಬಗ್ಗೆ ಮಾತನಾಡಲ್ಲ. ಸದ್ಯ ನೀರು ಬಿಡಲ್ಲ ಅನ್ನೋ ತಮ್ಮ ನಿಲುವಿಗೆ ಅವರು ಗಟ್ಟಿಯಾಗಿ ನಿಲ್ಲಬೇಕು. ನಾವು ಈ ನಿಲುವಿನ ಬಗ್ಗೆ ಸರ್ಕಾರದ ಜೊತೆ ನಿಲ್ತೇವೆ, ಒಂದು ವೇಳೆ ನೀರು ಬಿಟ್ಟರೆ ನಾವು ಸರ್ಕಾರದ ವಿರುದ್ಧ ಹೋರಾಡ್ತೀವಿ ಎಂದು ಎಚ್ಚರಿಸಿದ್ದಾರೆ.

Web Stories

Share This Article