ಲಕ್ನೋ: ಮನೆ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಮಾಜಿ ವಾಯುಪಡೆ ಅಧಿಕಾರಿಯನ್ನು ಸುಪಾರಿ ಕೊಟ್ಟು ಗುಂಡಿಕ್ಕಿ ಕೊಲ್ಲಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಹತ್ಯೆಯಾದವರನ್ನು ಬಾಗ್‌ಪತ್ ಜಿಲ್ಲೆ ಮೂಲದ ನಿವೃತ್ತ ಐಎಎಫ್ ಅಧಿಕಾರಿ ಯೋಗೇಶ್ (58) ಎಂದು ಗುರುತಿಸಲಾಗಿದೆ. ಡಿಸೆಂಬರ್ 26 ರಂದು ಲೋನಿ ಪ್ರದೇಶದ ಅಶೋಕ್ ವಿಹಾರ್ ಕಾಲೋನಿಯಲ್ಲಿರುವ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಯೋಗೇಶ್ ತನ್ನ ಪುತ್ರರಿಗೆ ಮನೆಯನ್ನು ಖಾಲಿ ಮಾಡುವಂತೆ ಸೂಚಿಸಿದ್ದರು. ಆಸ್ತಿಯ ದುರಾಸೆಯಿಂದ ಮಕ್ಕಳೇ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಆಗ್ತೀನಿ ಅಂತ ನಂಬಿಸಿ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಸರ್ಕಾರಿ ವೈದ್ಯನಿಂದ ಅತ್ಯಾಚಾರ
ಯೋಗೇಶ್ ಪುತ್ರರು ನೆರೆಯ ಅರವಿಂದ್ (32) ಎಂಬಾತನಿಗೆ ಸುಪಾರಿ ಕೊಟ್ಟು ಕೊಲೆಗೆ ನೇಮಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಅರವಿಂದ್‌ನ ಸೋದರ ಮಾವ ನವೀನ್ ಎಂಬಾತ ಸಹ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಈತ ಕೌಶಂಬಿ ಜಿಲ್ಲೆಯಲ್ಲಿ ಕಾನ್‌ಸ್ಟೆಬಲ್ ಆಗಿ ನಿಯೋಜನೆಗೊಂಡಿದ್ದ ಎಂದು ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ. ಅರವಿಂದ್, ಯೋಗೇಶ್ ಮೇಲೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಅರವಿಂದ್‌ನನ್ನು ಬಂಧಿಸಿ ಗಾಜಿಯಾಬಾದ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ .315 ಬೋರ್ ದೇಶೀಯ ನಿರ್ಮಿತ ಪಿಸ್ತೂಲ್, ಎರಡು ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಬಳಸಿದ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನ್‌ಸ್ಟೆಬಲ್ ನವೀನ್ ಮತ್ತು ಯೋಗೇಶ್‌ನ ಇಬ್ಬರು ಪುತ್ರರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶ | ಮೂವರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ

