ಬೆಳಗಾವಿ: ಪ್ರತಿಯೊಂದು ಗಂಡಿಗೂ ಒಂದು ಹೆಣ್ಣನ್ನು ಸೃಷ್ಟಿ ಮಾಡಿಯೇ ಮಾಡಿರುತ್ತಾನೆ ಆ ದೇವರು ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಮಲ್ಲಿಕಾರ್ಜುನ(ಮಲ್ಲಯ್ಯ) ದೇವರಿಗೆ ಇನ್ನೂ ಮದುವೆಯಾಗಿಲ್ಲ. ಏಕೆಂದರೆ ಪ್ರತಿ ವರ್ಷ ಮಲ್ಲಯ್ಯ ತಾಳಿ ಕಟ್ಟುವುದರೊಳಗೆ ಸಂಕ್ರಾಂತಿ ಬರುತ್ತಿರುವ ಹಿನ್ನೆಲೆಯಲ್ಲಿ ಮದುವೆಯನ್ನು ನಿಲ್ಲಿಸಲಾಗುತ್ತದೆ. ಹೀಗಾಗಿ ಈ ದೇವರಿಗೆ ಇದೂವರೆಗೂ ಕಂಕಣ ಭಾಗ್ಯವೇ ಕೂಡಿ ಬಂದಿಲ್ಲ.
ಅಮ್ಮಣಗಿ ಗ್ರಾಮದ ಮಲ್ಲಯ್ಯ ದೇವಸ್ಥಾನದಲ್ಲಿ ಪ್ರತಿ ವರ್ಷದ ಸಂಕ್ರಾಂತಿ ಹಬ್ಬ ಸಂದರ್ಭದಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ. ಸಂಕ್ರಮಣದ ನಿಮಿತ್ತವಾಗಿ ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಹತ್ತು ಹಲವು ಆಚರಣೆಗಳು ನಡೆಯುತ್ತಲೇ ಇರುತ್ತವೆ. ಅಂತಹ ಆಚರಣೆಗಳಲ್ಲಿ ಮಲ್ಲಯ್ಯ ಹಾಗೂ ಭ್ರಮರಾಂಭ ದೇವಿಯ ಕಲ್ಯಾಣ ಮಹೋತ್ಸವವೂ ಕೂಡ ಒಂದಾಗಿದೆ.
Advertisement
Advertisement
ಪ್ರತಿ ವರ್ಷವೂ ಕೂಡ ಸಂಕ್ರಾಂತಿಯ ಸಂದರ್ಭದಲ್ಲಿ ಮದುವೆಯ ರೀತಿಯಲ್ಲೇ ಎಲ್ಲಾ ತಯಾರಿಯನ್ನು ಮಾಡಲಾಗಿರುತ್ತದೆ. ಅಕ್ಷತೆ, ಮಾಂಗಲ್ಯ, ಭಾಜಾ ಭಜಂತ್ರಿ ಎಲ್ಲವೂ ಕೂಡ ಇರುತ್ತದೆ. ಇನ್ನೇನು ಇವರಿಬ್ಬರ ಮದುವೆಯಾಗಬೇಕು ಎನ್ನುವುದರೊಳಗಾಗಿಯೇ ಮಧ್ಯರಾತ್ರಿಯಲ್ಲಿ ಸಂಕ್ರಮಣ ಬಂದೇ ಬಿಡುತ್ತದೆ. ಈ ಸಂದರ್ಭದಲ್ಲಿ ಮದುವೆ ನಡೆಸುವುದು ನಿಷಿದ್ಧ ತೀರ್ಮಾನಿಸಿ ಮದುವೆಯನ್ನೇ ಗ್ರಾಮಸ್ಥರು ರದ್ದು ಮಾಡುತ್ತಾರೆ. ಮುಂದಿನ ವರ್ಷ ಈ ಆಚರಣೆ ಪುನರಾವರ್ತನೆ ಆಗುತ್ತದೆ. ಹೀಗೆ ಕಳೆದ 400 ವರ್ಷಗಳಿಂದ ಆಚರಣೆ ನಡೆದುಕೊಂಡು ಬಂದಿದೆ ಎಂದು ಹಿರಿಯರು ಹೇಳುತ್ತಾರೆ.
Advertisement
Advertisement
ಸಂಭ್ರಮ ಹೇಗಿರುತ್ತೆ?
ಸಂಕ್ರಾಂತಿಯ ಸಂದರ್ಭದಲ್ಲಿ ಅಮ್ಮಣಗಿ ಮಲ್ಲಯ್ಯ ದೇವಸ್ಥಾನವನ್ನು ದೀಪದಿಂದ ಅಲಂಕಾರ ಮಾಡಲಾಗುತ್ತದೆ. ವಧು-ವರರಿಗಾಗಿ ಕಲ್ಯಾಣ ಮಂಟಪವನ್ನು ಕೂಡ ಸಿಂಗರಿಸಲಾಗಿರುತ್ತದೆ. ಭಾಜಾ ಭಜಂತ್ರಿ, ಭೋಜನಾ ಎಲ್ಲವೂ ಸಿದ್ಧಗೊಂಡಿರುತ್ತದೆ. ಆದರೆ ಮದುವೆ ಮಾತ್ರ ಈ ದೇವರಿಗೆ ನಡೆಯುವುದೇ ಇಲ್ಲ.
ಮದುವೆಗಾಗಿ ಎಲ್ಲಾ ಆಚರಣೆಗಳನ್ನೂ ಕೂಡ ಮಲ್ಲಯ್ಯ ದೇವಸ್ಥಾನದಲ್ಲಿ ಭಕ್ತ ವೃಂದ ಮಾಡಿಕೊಂಡು ಬರುತ್ತದೆ. ಆದರೂ ಕೂಡ ಕೊನೆ ಗಳಿಗೆಯಲ್ಲಿ ಮುಹೂರ್ತ ಮೀರಿ ಹೋಯಿತು ಎನ್ನುವ ಕಾರಣಕ್ಕಾಗಿಯೇ ಮಲ್ಲಯ್ಯನಿಗೆ ಕಂಕಣ ಭಾಗ್ಯ ಕೈ ತಪ್ಪಿ ಹೋಗುತ್ತದೆ.
ಪ್ರತಿ ವರ್ಷ ಪುನರಾವರ್ತನೆಯಾಗುತ್ತಿದ್ದರೂ ಯಾಕೆ ಈ ಆಚರಣೆ ಮಾಡಲಾಗುತ್ತಿದೆ ಎಂದು ಕೇಳಿದ್ದಕ್ಕೆ, ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದನ್ನು ನಾವು ಮುಂದುವರಿಸುವುದು ನಮ್ಮ ಕರ್ತವ್ಯ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv