ಸಿದ್ದಗಂಗಾ ಶ್ರೀಗಳು ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ: ಕೆ.ಗೋಪಾಲಯ್ಯ

Public TV
1 Min Read
GOPALAIAH 1

ಬೆಂಗಳೂರು: ನಡೆದಾಡುವ ದೇವರು ಎಂದೇ ಭಕ್ತ ಕುಲಕೋಟಿಯಿಂದ ಕರೆಸಿಕೊಳ್ಳುತ್ತಿದ್ದ ಸಿದ್ದಗಂಗೆಯ ಲಿಂಗ್ಯಕ್ಯ ಶ್ರೀ ಶಿವಕುಮಾರ ಶ್ರೀಗಳು ತಮ್ಮ ಸೇವಾ ಕಾರ್ಯಗಳ ಮೂಲಕ ಜನಮಾನ ಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೃಷಭಾವತಿ ನಗರದ 102ನೇ ವಾರ್ಡ್ ನಲ್ಲಿಂದು ಹಮ್ಮಿಕೊಂಡಿದ್ದ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅನ್ನ, ಅಕ್ಷರ, ಆಶ್ರಯ ಈ ತ್ರಿವಿಧ ದಾಸೋಹದ ಮೂಲಕ ನಾಡಿನ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಶ್ರೀಗಳು ಹಾಕಿಕೊಟ್ಟು ಹೋದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.

siddaganga APJ 1

ಮಹಾಲಕ್ಷ್ಮಿ ಲೇ ಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಬಡ ಮತ್ತು ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಎನ್ನುವ ಕೊರಗನ್ನು ನಿವಾರಿಸುವ ಸಲುವಾಗಿ ಕ್ಷೇತ್ರದ ನಾಲ್ಕು ಕಡೆಗಳಲ್ಲಿ ದೆಹಲಿ ಮಾದರಿಯಲ್ಲಿ ಆಧುನಿಕ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಶಾಲೆಗಳಿಗೆ ಮಕ್ಕಳ ಸೇರ್ಪಡೆಗೆ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಹೆಚ್ಚುವರಿ ಕೊಠಡಿ ಮತ್ತು ಹೆಚ್ಚುವರಿ ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಇಂದು ಶಿವಕುಮಾರ ಶ್ರೀಗಳ 3ನೇ ವರ್ಷದ ಪುಣ್ಯಸ್ಮರಣೆ- ಮಠದ ಗದ್ದಿಗೆಯಲ್ಲಿ ಸರಳ ಪೂಜೆ

GOPALAIAH

ಇಂದು ಮಕ್ಕಳಲ್ಲಿ ಉತ್ತಮ ಶಿಕ್ಷಣದ ಬೀಜ ಬಿತ್ತಿದರೆ ಭವಿಷ್ಯದಲ್ಲಿ ಅದು ಬೆಳೆದು ವಿಶಾಲವಾದ ಮರವಾಗಿ ಹರಡಿ ಸಾವಿರಾರು ಜನರಿಗೆ ಆಶ್ರಯ ನೀಡಬಲ್ಲದು. ಇದೇ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಸಿದ್ದಗಂಗಾ ಶ್ರೀಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು. ಸಿದ್ದಗಂಗಾ ವಿದ್ಯಾಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ಮಕ್ಕಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜಕರು, ಸ್ಥಳೀಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *