– ಅಪಘಾತದ ಬಳಿಕ ಪಿಟಿಎಸ್‌ಡಿ ಎಂಬ ಕಾಯಿಲೆಯಿಂದ ಬಳಲುತ್ತಿರುವ ವಿಶ್ವಾಸ್ ಕುಮಾರ್ ರಮೇಶ್
ನವದೆಹಲಿ: ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಪತ್ನಿ, ಮಗನೊಂದಿಗೆ ಮಾತಾಡೋಕೆ ಕಷ್ಟವಾಗುತ್ತದೆ ಎಂದು ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad Air India Clash) ಬದುಕಿದ್ದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಂದರ್ಶನವೊಂದಲ್ಲಿ ಮಾತನಾಡಿದ ಅವರು, ಈ ದುರಂತದಲ್ಲಿ ನಾನು ನನ್ನ ಸಹೋದರ ಅಜಯ್‌ನನ್ನು ಕಳೆದುಕೊಂಡೆ. ನಾನೊಬ್ಬ ಅದೃಷ್ಟಶಾಲಿ ಪವಾಡ ಸದೃಶವಾಗಿ ಪಾರಾಗಿದ್ದೇನೆ. ಆದರೆ ಇಂದಿಗೂ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದೇನೆ. ಎಲ್ಲವನ್ನೂ ಕಳೆದುಕೊಂಡೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್ ಇಂಡಿಯಾ
ದುರಂತದ ಬಳಿಕ ನಾನು ಇಂಗ್ಲೆಂಡ್‌ನಲ್ಲಿರುವ ಲೀಸೆಸ್ಟರ್‌ಗೆ ನಮ್ಮ ಮನೆಗೆ ಮರಳಿದೆ. ಇಂದಿಗೂ ದುರಂತದಲ್ಲಿ ನಡೆದಿದ್ದ ಎಲ್ಲವೂ ನನ್ನನ್ನು ಕಾಡುತ್ತಿವೆ. ಒಬ್ಬಂಟಿಯಾಗಿದ್ದೇನೆ, ಕೋಣೆಯಲ್ಲಿ ಯಾವಾಗಲೂ ಒಬ್ಬನೇ ಇರಬೇಕು ಎಂದು ಅನಿಸುತ್ತೆ. ಹೆಂಡತಿ, ಮಗನೊಂದಿಗೆ ಮಾತಾಡಲು ಕಷ್ಟವಾಗುತ್ತದೆ. ಕಳೆದ ನಾಲ್ಕು ತಿಂಗಳಿನಿಂದ ನನ್ನ ತಾಯಿ ಪ್ರತಿದಿನ ಮನೆ ಹೊರಗೆ ಕುಳಿತು ನನ್ನ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ನಾನು ಬೇರೆಯವರೊಂದಿಗೆ ಮಾತಾಡುವುದಿಲ್ಲ, ಹೆಚ್ಚು ಮಾತಾಡೋಕೆ ಆಗಲ್ಲ, ನಾನು, ನನ್ನ ಕುಟುಂಬದ ಎಲ್ಲರೂ ಮಾನಸಿಕವಾಗಿ ಬಳಲುತ್ತಿದ್ದೇವೆ. ನಿತ್ಯವು ನೋವನ್ನು ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ದುರಂತದ ಬಳಿಕ ನನಗೆ ಆಘಾತಕಾರಿ ಒತ್ತಡದ ಅಸ್ವಸ್ಥತೆಯ ಸಮಸ್ಯೆ (ಪಿಟಿಎಸ್‌ಡಿ) (ದುರಂತ ನಡೆದ ಬಳಿಕ ಉಂಟಾಗುವ ಮಾನಸಿಕ ಆರೋಗ್ಯದ ಸಮಸ್ಯೆ) ಇರುವುದು ಗೊತ್ತಾಗಿದೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ನೋವು ಉಂಟಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅದಲ್ಲದೇ ನನಗೆ ಸರಿಯಾಗಿ ನಡೆಯಲು ಬರುವುದಿಲ್ಲ, ಹೆಂಡತಿಯ ಸಹಾಯ ಬೇಕು. ಕಾಲು, ಭುಜ, ಮೊಣಕಾಲು ಮತ್ತು ಬೆನ್ನಿನಲ್ಲಿ ನಿರಂತರವಾಗಿ ನೋವು ಅನುಭವಿಸುತ್ತಿದ್ದೇನೆ ಎಂದಿದ್ದಾರೆ.
ಇದೇ ಜೂನ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ 242 ಜನರ ಪೈಕಿ 241 ಜನ ಸಾವನ್ನಪ್ಪಿದ್ದು, ವಿಶ್ವಾಸ್ ಕುಮಾರ್ ರಮೇಶ್ ಪವಾಡ ಸದೃಶ್ಯ ಪಾರಾಗಿದ್ದರು. ಗಾಯಗೊಂಡಿದ್ದ ಅವರು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಜೂನ್ 17ರಂದು ಡಿಸ್ಚಾರ್ಜ್ ಆಗಿದ್ದರು. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ರಮೇಶ್ ಅವರಿಗೆ 22 ಲಕ್ಷ ರೂ. ಪರಿಹಾರ ಧನ ನೀಡಿದೆ.ಇದನ್ನೂ ಓದಿ:ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ


