ಸಂವಿಧಾನ ಉಳಿವಿಗಾಗಿ ಪಕ್ಷದ ಎಲ್ಲರೂ ಹೋರಾಡಬೇಕು: ರಾಹುಲ್ ಗಾಂಧಿ

Public TV
1 Min Read
Rahul Gandhi CPP Meet

ನವದೆಹಲಿ: ಸಂವಿಧಾನ ಉಳಿವಿಗಾಗಿ ಪಕ್ಷ ಎಲ್ಲರೂ ಹೋರಾಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷ (ಸಿಪಿಪಿ) ಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವರ್ಣ ಹಾಗೂ ನಂಬಿಕೆಯ ವಿಚಾರವಾಗಿ ಶೋಷಣೆಗೆ ಒಳಗಾಗುತ್ತಿರುವ ಜನರ ಪರವಾಗಿ ಹೋರಾಡಬೇಕು. ಕಾಂಗ್ರೆಸ್‍ನ ಪ್ರತಿಯೊಬ್ಬರು ಸಂವಿಧಾನ ರಕ್ಷಣೆಗಾಗಿ ಶ್ರಮಿಸಬೇಕು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ ಎಂದು ತಿಳಿಸಿದರು.

ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರಿಗೆ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದರು.

Rahul Gandhi CPP Meet A

ಈ ಸಭೆಯಲ್ಲಿ ಸೇರಿದ್ದ ಕಾಂಗ್ರೆಸ್‍ನ 52 ಜನ ನೂತನ ಸಂಸದರು ಹಾಗೂ ನಾಯಕರು ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆಗಳು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲವಾದ ಮತ್ತು ಪರಿಣಾಮಕಾರಿ ವಿರೋಧ ಪಕ್ಷವೆಂದು ಸಾಬೀತುಪಡಿಸುತ್ತದೆ. ಇದು ಭಾರತದ ಸಂವಿಧಾನ ರಕ್ಷಿಸುವ ಹೋರಾಟ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ನಡೆದ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ ಅವರ ಆಯ್ಕೆ ಆಗಿದ್ದು, ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಸಭೆಯಲ್ಲಿ ಸೋನಿಯಾರ ಹೆಸರನ್ನು ಪ್ರಸ್ತಾಪ ಮಾಡಿದ್ದು, ಎಲ್ಲಾ ನಾಯಕರು ಒಮ್ಮತದಿಂದ ಅಂಗೀಕರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಲೋಕಸಭಾ ಸಭೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆಯಲು ಇನ್ನು 3 ಸ್ಥಾನಗಳ ಅಗತ್ಯ ಇರುವುದರಿಂದ ಕಳೆದ ಬಾರಿಯಂತೆಯೇ ಈ ಬಾರಿಯೂ ಸಂಸದೀಯ ನಾಯಕರನ್ನು ಆಯ್ಕೆ ಮಾಡಲಾಗಿದೆ. 2014ರ ಲೋಕಸಭಾ ಚುನಾವಣೆಯ ಬಳಿಕ ಸಂಸತ್ ಸಂಸದೀಯ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆ ಆಗಿದ್ದರು. 2014 ರಲ್ಲಿ 44 ಇದ್ದ ಕಾಂಗ್ರೆಸ್ ಸಂಸದರ ಸಂಖ್ಯೆ ಈ ಬಾರಿ 52 ಏರಿಕೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *