ಯಾವುದೇ ಸಿನಿಮಾವಾದರೂ ಹಾಡುಗಳು (Song) ಪ್ರೇಕ್ಷಕರ ಎದೆಗಿಳಿದು, ಆ ಮೂಲಕ ಮೂಡಿಕೊಳ್ಳುವ ಕೌತುಕ ಮೊದಲ ಗೆಲುವಿದ್ದಂತೆ. ಅಂಥಾದ್ದೊಂದು ಮೆಲೋಡಿಯಸ್ ಮೋಡಿಯ ದೆಸೆಯಿಂದಲೇ ಗೆದ್ದು ಬೀಗಿದ ಸಾಕಷ್ಟು ಸಿನಿಮಾಗಳ ಉದಾಹರಣೆಗಳಿದ್ದಾವೆ. ಆ ಸಾಲಿಗೆ ಸೇರ್ಪಡೆಯಾಗಬಲ್ಲ ಎಲ್ಲ ಗುಣ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ `ನಗುವಿನ ಹೂಗಳ ಮೇಲೆ’ (Naguvina hoogala mele). ಶೀರ್ಷಿಕೆಯಲ್ಲಿಯೇ ನವಿರು ಭಾವವನ್ನು ಬಚ್ಚಿಟ್ಟುಕೊಂಡಿರುವ, ಅಷ್ಟೇ ತಾಜಾ ತಾಜ ಕಥೆಯನ್ನೊಳಗೊಂಡಿರುವ ಈ ಚಿತ್ರವನ್ನು ವೆಂಕಟ್ ಭಾರದ್ವಾಜ್ (Venkat Bharadwaj) ನಿರ್ದೇಶನ ಮಾಡಿದ್ದಾರೆ. ಇದೇ ಫೆಬ್ರವರಿ 9ರಂದು ತೆರೆಗಾಣಲಿರುವ ನಗುವಿನ ಹೂಗಳ ಮೇಲೆ ಒಂದಷ್ಟು ಬೆರಗುಗಳಿವೆ. ಅದರಲ್ಲಿ ಹಾಡುಗಳು ಮತ್ತು ತಾಂತ್ರಿಕ ಶ್ರೀಮಂತಿಕೆಯದ್ದೇ ಮೇಲುಗೈ.
Advertisement
ಇದು ಪ್ರೇಮ ಕಥಾನಕವೆಂಬ ವಿಚಾರ ತಿಳಿದಾಕ್ಷಣವೇ ನಗುವ ಹೂಗಳ ಮೇಲೆ ಸಿದ್ಧಸೂತ್ರಗಳ ಛಾಯೆ ಇದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಈ ಕಥೆಯ ಹುಟ್ಟಿನ ಮೂಲದಲ್ಲಿಯೇ ಭಿನ್ನ ಆಲೋಚನೆಗಳಿವೆ. ಅಷ್ಟಕ್ಕೂ ವೆಂಕಟ್ ಭಾರದ್ವಾಜ್ ಅವರ ನಿರ್ದೇಶನದ ಗ್ರಾಫ್ ಅನ್ನೊಮ್ಮೆ ಪರಿಶೀಲಿಸಿದರೆ ಎಲ್ಲವೂ ಮನದಟ್ಟಾಗುತ್ತದೆ. ಹದಿನೆಂಟರಿಂದ ಎಂಬತ್ತನೇ ವಯೋಮಾನದವರೆಗೂ ಹಿಡಿಸಬಲ್ಲಂಥಾ ವಿಶಿಷ್ಟ ಪ್ರೇಮ ಕಥೆ ಇಲ್ಲಿದೆ. ಹಾಗಿದ್ದ ಮೇಲೆ ಇಲ್ಲಿನ ಹಾಡುಗಳನ್ನೂ ಕೂಡಾ ಭಿನ್ನವಾಗಿಯೇ ರೂಪಿಸಬೇಕೆಂಬ ಇರಾದೆಯಿಂದ ವೆಂಕಟ್ ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅದರ ಭಾಗವಾಗಿಯೇ ಪಂಜಾಬ್ ಮೂಲದ ಪ್ರಸಿದ್ಧ ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹತಾರನ್ನು ನೆಚ್ಚಿಕೊಂಡಿದ್ದಾರೆ.
Advertisement
Advertisement
ಲವ್ ಫ್ರಾನ್ ಮೆಹೆತಾ ಪಂಜಾಬ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಂಗೀತ ನಿರ್ದೇಶಕ. ಅವರ ಸಾರಥ್ಯದಲ್ಲಿ ಹಾಡುಗನ್ನು ರೂಪಿಸಿರುವ ವೆಂಕಟ್, ಆ ಭಾವಕ್ಕೆ ತಕ್ಕುದಾದ ಕಂಠಗಳನ್ನೇ ತಲಾಶು ನಡೆಸಿದ್ದಾರೆ. ಈ ಹಾಡುಗಳಿಗೆ ಕನ್ನಡದ ಖ್ಯಾತ ಕವಿ ಚಿದಂಬರ ನರೇಂದ್ರ ಎರಡು ಹಾಡುಗಳನ್ನು ಬರೆದಿದ್ದಾರೆ. ಇನ್ನುಳಿದಂತೆ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಎರಡು ಹಾಗೂ ನರೇಂದ್ರ ಬಾಬು ಅವರು ಒಂದು ಹಾಡನ್ನು ಬರೆದಿದ್ದಾರೆ. ಅದಕ್ಕೆ ಇಂಡಿಯನ್ ಐಡಲ್ ರನ್ನರ್ ಅಪ್ ಆಗಿರುವ ತೇಜೇಂದರ್ ಸಿಂಗ್, ನಿಹಾರಿಕಾ, ಕೇರಳ ಮೂಲದ ವಿಮಲ್ ಮತ್ತು ಮೇಘನಾ ಭಟ್ ಧ್ವನಿಯಾಗಿದ್ದಾರೆ. ಈ ಐದೂ ಹಾಡುಗಳೂ ಕೂಡಾ ಸೂಪರ್ ಹಿಟ್ ಆಗಿವೆ.
Advertisement
ಪ್ರಧಾನವಾಗಿ, ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ಅಭಿಷೇಕ್ ಅಯ್ಯಂಗಾರ್ ಈ ಮೂಲಕ ಸಂಭಾಷಣಾಕಾರರಾಗಿದ್ದಾರೆ. ಎಲ್ಲವೂ ವಿಶೇಷವಾಗಿರಬೇಕೆಂಬ ದೃಷ್ಟಿಯಿಂದ ಐದು ವರ್ಷನ್ ಸಂಭಾಷಣೆ ರೆಡಿ ಮಾಡಿ, ಅದರಲ್ಲೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಅಂದಹಾಗೆ ಮೇಲುನೋಟಕ್ಕೆ ಇದು ಪ್ರೇಮ ಕಥೆಯ ಚಿತ್ರ ಅನ್ನಿಸೋದು ನಿಜ. ಆದರೆ, ಇಲ್ಲಿ ಬದುಕಿಗೆ ಹತ್ತಿರಾದಂಥಾ, ನೋಡಿದ ಪ್ರತಿಯೊಬ್ಬರಿಗೂ ತಮ್ಮದೇ ಅನ್ನಿಸುವಂಥಾ ಸೂಕ್ಷ್ಮ ಭಾವಗಳಿದ್ದಾವಂತೆ. ಸಮಯವೆಂಬುದು ಎಂತೆಂಥಾ ಅಚ್ಚರಿಗಳಿಗೆ, ಆಘಾತಗಳಿಗೆ ಕಾರಣವಾಗುತ್ತದೆಂಬುದರ ಸುತ್ತ ಕಥೆ ಚಲಿಸುತ್ತದೆಯಂತೆ.
ಕೇವಲ ಹಾಡುಗಳ ವಿಚಾರದಲ್ಲಿ ಮಾತ್ರವಲ್ಲದೇ, ತಾಂತ್ರಿಕವಾಗಿಯೂ ನಗುವಿನ ಹೂಗಳ ಮೇಲೆ ಹೊಸತನ ಮೇಳೈಸಿದೆ. ಇದರ ಹಿನ್ನೆಲೆ ಸಂಗೀತವನ್ನು ಲಂಡನ್ನಿನಲ್ಲಿ ಹೊಳಪುಗಟ್ಟಿಸಲಾಗಿದೆ. ಅಲ್ಲಿನ ಪ್ರಸಿದ್ಧ ತಂತ್ರಜ್ಞರು ಕೂಡಾ ಈ ಕಾರ್ಯದಲ್ಲಿ ಸಾಥ್ ಕೊಟ್ಟಿದ್ದಾರೆ. ಹೀಗೆ ಎಲ್ಲದರಲ್ಲಿಯೂ ವಿಶೇಷತೆಗಳನ್ನು ಹೊಂದಿರುವ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧ ಮೋಹನ್ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಮತ್ತು ಶರಣ್ಯಾ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.