ಬೆಂಗಳೂರು: ಮುಂಗಾರು ಕೊರತೆ ಎದುರಿಸುತ್ತಿದ್ದ ರಾಜ್ಯದ ಹಲವು ಭಾಗಗಳಲ್ಲಿ ಇಂದು ಸಂಜೆ ವೇಳೆಗೆ ಬೀರುಸಿನ ಮಳೆಯಾಗಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಾವೇರಿ, ಧಾರಾವಾಡ, ರಾಯಚೂರು ಜಿಲ್ಲೆಯಗಳ ಕೆಲ ಭಾಗಗಳಲ್ಲಿ ಮಳೆಯಾಗಿದೆ.
ನಗರದ ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ದಿಢೀರ್ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ಆಕಾಲಿಕ ಮಳೆಯಿಂದ ವಾಹನ ಸವಾರರ ಪರದಾಟ ನಡೆಸಿದರು. ರಾಜ್ಯದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Advertisement
Advertisement
ಇತ್ತ ಹಾವೇರಿ ಜಿಲ್ಲೆಯ ಜಿಲ್ಲೆಯ ನೆಗಳೂರು, ಹಂದಿಗನೂರು, ಹೊಸರಿತ್ತಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಪರಿಣಾಮ ರೈತರ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆನಸಿನಕಾಯಿ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿವೆ. ಪರಿಣಾಮ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.
Advertisement
ಧಾರವಾಡದಲ್ಲೂ ವರುಣ ಅಬ್ಬರಿಸಿದ್ದು, ಮಳೆ ನೀರಿನಿಂದಾಗಿ ನಗರದ ಬಿಆರ್ ಟಿಎಸ್ ಬಸ್ ಕಾರಿಡಾರ್ ಜಲಾವೃತಗೊಂಡಿತ್ತು. ಹೀಗಾಗಿ ಧಾರವಾಡ-ಹುಬ್ಬಳ್ಳಿ ನಡುವೆ ಓಡಾಡುವ ಬಸ್ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅದರಲ್ಲೂ ಟೋಲ್ ನಾಕಾ ಬಳಿಯ ರಸ್ತೆಯು ಹಳ್ಳದ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮ ವಾಹನ ಸವಾರರು ಪರದಾಟ ನಡೆಸಿದರು.
Advertisement
ಸದ್ಯ ಮುಂಗಾರು ಮಳೆ ಕೊರತೆ ಅನುಭವಿಸಿದ್ದ ರಾಜ್ಯದ ಜನರಿಗೆ ಭಾರೀ ಮಳೆಯ ಮುನ್ಸೂಚನೆ ಲಭಿಸಿರುವುದರಿಂದ ಕೊಂಚ ಮಂದಹಾಸ ಮೂಡಿದೆ. ಈಗಾಗಲೇ ಮಳೆ ಆಗಿರುವ ಭಾಗದಲ್ಲಿ ಬಿತ್ತನೆ ಮಾಡಿರುವ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಗಾಳಿಯ ಒತ್ತಡ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.