Chikkamagaluru

ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರನಿಗೆ ಇಂದಿಗೂ ಬಂಡಿ ಅನ್ನ ಹಾಕೋ ಗ್ರಾಮವಿದು!

Published

on

Share this

ಚಿಕ್ಕಮಗಳೂರು: ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರ ಚಿಕ್ಕಮಗಳೂರು ತಾಲೂಕಿನ ಬೆಳವಾಡಿಯಲ್ಲಿ ಇಂದಿಗೂ ಜೀವಂತವಾಗಿದ್ದಾನೆ. ಈ ಗ್ರಾಮದ ಜನ ಬಕಾಸುರನಿಗೆಂದು ಒಂದು ಬಂಡಿ ಅನ್ನ, ಎಂಟು ಬಂಡಿ ಪಾನಕವನ್ನ ಎಡೆ ಮಾಡೋ ಸಂಪ್ರದಾಯವನ್ನ ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ದಿನದಂದು ಆರಂಭವಾಗಿ ನಾಲ್ಕು ದಿನ ನಡೆಯೋ ಈ ಬಂಡಿಬಾನ ಜಾತ್ರೆಗೆ ಶೃಂಗೇರಿ ಮಠ ಧನಸಹಾಯ ಮಾಡ್ತಿದೆ. ಮಹಾಭಾರತದ ಕಾಲದಲ್ಲಿ ಏಕ ಚಕ್ರ ನಗರ ಎಂದು ಕರೆಯುತ್ತಿದ್ದ ಈ ಗ್ರಾಮ ಇಂದು ಬೆಳವಾಡಿ ಎಂದು ಕರೆಸಿಕೊಳ್ತಿದೆ.

ಹೆಜ್ಜೆಗೊಂದು ತೆಂಗಿನಕಾಯಿ: ಬಕಾಸುರನಿಗೆ ಅನ್ನವನ್ನ ತೆಗೆದುಕೊಂಡು ಹೋಗುವಾಗ ಊರಿನ ಜನ ಹೆಜ್ಜೆಗೊಂದರಂತೆ ಬಂಡಿಯ ಚಕ್ರಕ್ಕೆ ತೆಂಗಿನ ಕಾಯಿಯನ್ನ ಒಡೆಯುತ್ತಾರೆ. ಸಾವಿರ ಮನೆಯ ಗ್ರಾಮವಾದ ಬೆಳವಾಡಿಯ ಪ್ರಮುಖ ಬೀದಿಗಳಲ್ಲಿ ಬಂಡಿ ಸಾಗುವಷ್ಟರಲ್ಲಿ ಸುಮಾರು ಏಳರಿಂದ ಎಂಟು ಸಾವಿರ ತೆಂಗಿನ ಕಾಯಿಯನ್ನ ಒಡೆದು ಭಕ್ತಿ ಸಮರ್ಪಿಸ್ತಾರೆ. ಬಕಾಸುರನಿಗೆ ಒಂದು ಗಾಡಿ ಅನ್ನವಾದ್ರೆ, ಎಂಟು ಗಾಡಿಗಳಲ್ಲಿ ಪಾನಕವನ್ನೂ ತೆಗೆದುಕೊಂಡು ಹೋಗ್ತಾರೆ. ಎಲ್ಲಾ ಜಾತಿ-ಧರ್ಮದೋರು ಇರೋ ಈ ಗ್ರಾಮದಲ್ಲಿ ಈ ಜಾತ್ರೆಯನ್ನ ಎಲ್ಲರೂ ಒಂದುಗೂಡಿ ವಿಜೃಂಭಣೆಯಿಂದ ಆಚರಿಸ್ತಾರೆ. ನಾಲ್ಕು ದಿನಗಳ ಕಾಲ ಯಾರೊಬ್ರು ಯಾವುದೇ ಕೆಲಸ-ಕಾರ್ಯಗಳಿಗೆ ತೆರಳದೇ ಭಕ್ತಿಪೂರ್ವಕವಾಗಿ ಜಾತ್ರೆ ನಡೆಸುತ್ತಾರೆ.

ಬಂಡಿ ಅನ್ನದ ಮೆರವಣಿಗೆ: ಊರಿನಲ್ಲಿ ಮೆರವಣಿಗೆ ಮಾಡುವ ಹಿಂದಿನ ದಿನವೇ ಎಲ್ಲರೂ ತಮ್ಮ-ತಮ್ಮ ಮನೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸಿ ತಂದು ಒಂದೆಡೆ ಇಟ್ಟು ಎಡೆ ಮಾಡ್ತಾರೆ. ಆದ್ರೆ ವಿಶೇಷವೆಂದರೆ ವಿವಿಧ ರೀತಿಯ ಖಾದ್ಯಗಳನ್ನೆಲ್ಲಾ ಒಂದೆಡೆ ಇಟ್ಟು 24 ಗಂಟೆ ಕಳೆದ್ರೂ ಆಹಾರ ಹಾಳಾಗುವುದಿಲ್ಲ. ತದನಂತರ ಮಾರನೇ ದಿನ ಇವ್ರು ಎಲ್ಲರೂ ತಂದ ಆಹಾರವನ್ನ ಬಂಡಿಯಲ್ಲಿ ಹಾಕಿ ಮೆರವಣಿಗೆ ಮಾಡಿ ಊರಿಂದ ಹೊರಗೆ ತೆಗೆದುಕೊಂಡು ಹೋಗ್ತಾರೆ. ಊರಿನಲ್ಲಿ ಮೆರವಣಿಗೆ ಮಾಡಿದ ಬಂಡಿಯನ್ನ ಊರ ಹೊರಗೆ ಊರಿನ ಹಿರಿಯರು ಪೂಜೆ ಮಾಡಿ ಅದನ್ನ ಪ್ರಸಾದದ ರೂಪದಲ್ಲಿ ಎಲ್ಲರಿಗೂ ನೀಡ್ತಾರೆ. ಕೆಲವರು ಅಲ್ಲೇ ತಿಂದ್ರೆ, ಕೆಲವರು ಮನೆಗೆ ತಂದು ಹಾಗೇ ಇಡ್ತಾರೆ.

ಈ ಪ್ರಸಾದವನ್ನ ತಿಂದ್ರೆ ಒಂದು ವರ್ಷಗಳ ಕಾಲ ಯಾವುದೇ ರೋಗ-ರುಜಿನಗಳು ಬರೋದಿಲ್ಲ ಅನ್ನೋದು ಸ್ಥಳೀಯರ ನಂಬಿಕೆ. ಕೆಲವರು ಈ ಪ್ರಸಾದವನ್ನ ಮನೆಯಲ್ಲಿ ತಂದು ಇಡ್ಕೊಂಡು ದೊಡ್ಡವರಿಗೆ ಅಥವಾ ಮಕ್ಕಳಿಗೆ ಆರೋಗ್ಯ ಹದಗೆಟ್ಟಾಗ ನೀರಿನಲ್ಲಿ ಕದಡಿ ಕುಡಿಯುತ್ತಾರೆ. ಆಗ ಖಾಯಿಲೆ ಮಾಯವಾಗುತ್ತೆ ಅನ್ನೋದು ಇವ್ರ ನಂಬಿಕೆ. ಜಾತ್ರೆಯ ಸಮಯದಲ್ಲಿ ಇವ್ರು ತಮ್ಮ ಗ್ರಾಮವನ್ನ ತಳಿರು-ತೋರಣಗಳಿಂದ ಅಲಂಕರಿಸುತ್ತಾರೆ. ಯಾಕೆಂದರೆ, ಬಕಾಸುರನ ಅನ್ನದ ಬಂಡಿ ಸಾಗುವಾಗ ಅದು ಕಾಡಿನೊಳಗೆ ಸಾಗುತ್ತಿದೆ ಎಂದು ಭಾಸವಾಗಬೇಕು ಅನ್ನೋದು ಇವ್ರ ಆಶಯ.

https://youtu.be/Rle96s0s5kU

 

Click to comment

Leave a Reply

Your email address will not be published. Required fields are marked *

Advertisement
Advertisement