ನವದೆಹಲಿ: ಇನ್ನು ಮುಂದೆ ಅತ್ಯಾಚಾರ ಸಂತ್ರಸ್ತ ಮಕ್ಕಳ ಫೋಟೋವನ್ನು ಬ್ಲರ್ ಮಾಡಿ ಮಾಧ್ಯಮಗಳು ಸುದ್ದಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ.
ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಮಕ್ಕಳ ಗುರುತು ಬಹಿರಂಗ ಕುರಿತು ಸ್ವಯಃ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ನ್ಯಾಯಾಲಯ ಮಾಧ್ಯಮಗಳಿಗೆ ಸೂಚನೆ ನೀಡಿದೆ.
Advertisement
ಕಳೆದ ಕೆಲ ದಿನಗಳ ಬಿಹಾರದ ಅಪ್ರಾಪ್ತ ಬಾಲಕಿಯರ ಮೇಲೆ ವಸತಿ ನಿಯಲಯದ ಅಧಿಕಾರಿಗಳೇ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದ ಬಳಿಕ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಸರ್ಕಾರ ಹಾಗೂ ಬಿಹಾರ ರಾಜ್ಯಕ್ಕೆ ನೋಟಿಸ್ ಜಾರಿ ಮಾಡಿದೆ.
Advertisement
Advertisement
ಬಿಹಾರದ ಸ್ವಯಂ ಸೇವಾ ಸಂಸ್ಥೆಯೊಂದು ನಡೆಸುತ್ತಿದ್ದ ವಸತಿ ನಿಲಯದಲ್ಲಿದ್ದ ಸುಮಾರು 40 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೇ ಈ ಕುರಿತು ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ಸಹ ಲೈಂಗಿಕ ದೌಜನ್ಯ ನಡೆದಿರುವುದನ್ನು ಖಚಿತ ಪಡಿಸಿತ್ತು. ಈ ವರದಿಯ ಅನ್ವಯ ಎನ್ಜಿಒ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ವಸತಿ ನಿಲಯದಲ್ಲಿದ್ದ ಎಲ್ಲಾ ಬಾಲಕಿಯನ್ನು ರಕ್ಷಣೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ರಾಜ್ಯಪಾಲರು ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಇಂತಹ ಇತರೇ ಎನ್ಜಿಒ ಗಳ ವಿರುದ್ಧ ನೇರ, ಕಠಿಣ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.
Advertisement
ಬಿಹಾರದ ಮುಜಾಫರ್ ನಗರದ ಬ್ರಿಜೆಷ್ ಠಾಕೂರ್ ಎಂಬಾತ ತನ್ನ ಎನ್ಜಿಒ ಅಡಿ ಎರಡು ಬಾಲಕಿಯರ ವಸತಿ ನಿಲಯಗಳನ್ನು ನಡೆಸುತ್ತಿದ್ದ. ಈ ವಸತಿ ನಿಲಯದಲ್ಲಿದ್ದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೇ 11 ಬಾಲಕಿಯರು ವಸತಿ ನಿಲಯದಿಂದ ನಾಪತ್ತೆಯಾಗಿದ್ದರು.
ವಿಚಾರಣೆ ವೇಳೆ ದೇಶದಲ್ಲಿ ನಡೆದ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಉದಾಹಣೆಯಾಗಿ ನೀಡಿದ ನ್ಯಾಯಾಲಯ, ಅಪ್ರಾಪ್ತ ಮಕ್ಕಳ ಗುರುತು ಬಹಿರಂಗವಾದ ಬಳಿಕ ಬಾಲಕಿಯರ ಭವಿಷ್ಯ ಮೇಲೆ ಬೀಳುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿತು.
ಜಮ್ಮು ಕಾಶ್ಮೀರದ ಕತುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ವೇಳೆ ಬಾಲಕಿಯ ಫೋಟೋ ಹಾಗೂ ಧರ್ಮವನ್ನು ಕೆಲ ಮಾಧ್ಯಮಗಳು ಬಹಿರಂಗಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸದಂತೆ ದೆಹಲಿ ಹೈಕೋರ್ಟ್ 12 ಮಾಧ್ಯಮಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶಿಸಿತ್ತು. ದಂಡ ಹಣವನ್ನು ಜಮ್ಮು ಕಾಶ್ಮೀರದ ಸಂತ್ರಸ್ತ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಿತ್ತು.
ಈ ವಿಚಾರಣೆ ವೇಳೆ ಮಾಧ್ಯಮಗಳ ಪರ ವಕೀಲರು ಕಾನೂನನ್ನು ಅರ್ಥ ಮಾಡಿಕೊಳ್ಳುವಲ್ಲಿ ಲೋಪವಾಗಿದೆ. ಸಂತ್ರಸ್ತ ಬಾಲಕಿ ಮೃತಪಟ್ಟ ಕಾರಣ ನಾವು ಆಕೆಯ ಫೋಟೋವನ್ನು ಪ್ರಕಟಿಸಿದ್ದೇವೆ. ನಾವು ಎಸಗಿರುವ ತಪ್ಪಿಗೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದರು. ಆದರೆ ಹೈಕೋರ್ಟ್ ಮಾಧ್ಯಮಗಳ ಕ್ಷಮೆಯನ್ನು ಒಪ್ಪದೇ 10 ಲಕ್ಷ ರೂ. ದಂಡವನ್ನು ವಿಧಿಸಿತ್ತು. ಈ ಪ್ರಕರಣ ಬಳಿಕ ನ್ಯಾಯಾಲಯ ಮತ್ತೊಮ್ಮೆ ಮಾಧ್ಯಮಗಳಿಗೆ ಸೂಚನೆ ರವಾನಿಸಿದೆ.
ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ದಾಖಲಾಗುತ್ತದೆ. ಈ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾದರೆ ಸಂತ್ರಸ್ತರ ವಿವರ, ಫೋಟೋ ಸೇರಿದಂತೆ ಯಾವುದೇ ಮಾಹಿತಿಯನ್ನು ಪ್ರಕಟಿಸುವಂತಿಲ್ಲ.