ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಗುಪ್ತಚರ ವರದಿಯ ಬಳಿಕ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಕೈಗೊಳ್ಳಲಾಗಿದ್ದು, ಮಂತ್ರಿಗಳು ಮತ್ತು ಅಧಿಕಾರಿಗಳು ಸಹ ರಕ್ಷಣಾ ಸಿಬ್ಬಂದಿ ಪರಿಶೀಲನೆ ಬಳಿಕಷ್ಟೇ ಪ್ರಧಾನಿಗಳ ಬಳಿ ತೆರಳಬಹುದಾಗಿದೆ ಎಂದು ಗೃಹ ಸಚಿವಾಲಯ ಸೂಚನೆ ನೀಡಿದೆ.
ಮೋದಿ ಅವರ ಭದ್ರತೆಯ ಕುರಿತು ರಾಜ್ಯ ಸರ್ಕಾರಗಳಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಕಳುಹಿಸಿದೆ. ಮೋದಿಯವರು 2019ರ ಸಾರ್ವತ್ರಿಕ ಚುನಾವಣೆಗೆ “ಅತ್ಯಮೂಲ್ಯ ಗುರಿಯಾಗಿದ್ದು”, ಹತ್ಯೆ ಸಂಚು ರೂಪಿಸುವ ಕುರಿತ ಎಚ್ಚರಿಕೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಮೋದಿ ಅವರ ರೋಡ್ ಶೋಗಳ ಕಡಿತಗೊಳಿಸುವ ಸಲಹೆಯನ್ನು ನೀಡಿದ್ದು, ಬದಲಾಗಿ ಸಾರ್ವಜನಿಕ ಸಮಾವೇಶಗಳನ್ನು ನಡೆಸುವಂತೆ ಎಸ್‍ಪಿಜಿ (ವಿಶೇಷ ರಕ್ಷಣಾ ಪಡೆ) ಸಲಹೆ ನೀಡಿದೆ.
ಜೂನ್ 7 ರಂದು ಪುಣೆ ಪೊಲೀಸರು ಮೋದಿ ಹತ್ಯೆ ಸಂಚು ರೂಪಿಸಿರುವ ಕುರಿತು ಮಾಹಿತಿ ಬಹಿರಂಗ ಪಡಿಸಿದ ಬಳಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿ ಮೋದಿಯವರನ್ನು ಹತ್ಯೆ ಮಾಡಲಾಗುವುದು ಎಂದು ಪುಣೆ ಪೊಲೀಸರು ಬಹಿರಂಗಗೊಳಿಸಿದ್ದ ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆ ನಂತರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರವರು ಪ್ರಧಾನಿ ಮಂತ್ರಿಯ ಹತ್ಯೆ ಸಂಚು ರೂಪಿಸಿರುವ ಹಿನ್ನೆಲೆ ಭದ್ರತೆಯನ್ನು ಪರಿಶೀಲಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಗುಪ್ತಚರ ಇಲಾಖೆ ನಿದೇರ್ಶಕ ರಾಜೀವ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ಪ್ರಧಾನ ಮಂತ್ರಿಯ ಭದ್ರತಾ ವ್ಯವಸ್ಥೆ ಬಲಪಡಿಸಲು, ಇತರೆ ಏಜೆನ್ಸಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.
ದೇಶದಲ್ಲಿ ಛತ್ತಿಸ್‍ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಮಾವೋವಾದಿಗಳ ಪ್ರಭಾವ ಹೆಚ್ಚಾಗಿದ್ದು, ಗೃಹಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಪ್ರಧಾನಿ ತಮ್ಮ ರಾಜ್ಯಗಳಿಗೆ ಭೇಟಿ ನೀಡಿದಾಗ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಎಂದು ಹೊಸ ಮಾರ್ಗಸೂಚಿಗಳಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ.