ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದು, ಮೂರನೇ ಅವಧಿಯನ್ನು ಕೂಡ ಪೂರ್ಣಗೊಳಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಬಿಜೆಪಿ ಅಧಿಕಾರಕ್ಕೆ ಬಂದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೋದಿಜಿ 75 ನೇ ವರ್ಷಕ್ಕೆ ಕಾಲಿಡುತ್ತಿರುವ ಬಗ್ಗೆ ಸಂತೋಷಪಡುವ ಅಗತ್ಯವಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಮತ್ತು ಭಾರತ ಮೈತ್ರಿಕೂಟಕ್ಕೆ ಹೇಳಲು ಬಯಸುತ್ತೇನೆ. ಮೋದಿಜಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ಸಂವಿಧಾನದಲ್ಲಿ ಬರೆದಿಲ್ಲ. ಅವರು ಮತ್ತೆ ಪ್ರಧಾನಿ ಆಗಿಯೇ ಆಗುತ್ತಾರೆ ಎಂದು ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನನ್ನು ಕ್ಲೀನ್ ಚಿಟ್ ಎಂದು ಪರಿಗಣಿಸಬಾರದು. ಮಧ್ಯಂತರ ಜಾಮೀನು ಜೂನ್ 1 ರವರೆಗೆ ಮಾತ್ರ ನೀಡಲಾಗಿದ್ದು, ಜೂನ್ 2 ರಂದು ಅವರು ಶರಣಾಗಬೇಕು. ಅರವಿಂದ್ ಕೇಜ್ರಿವಾಲ್ ಇದನ್ನು ಕ್ಲೀನ್ ಚಿಟ್ ಎಂದು ಪರಿಗಣಿಸಿದರೆ, ಕಾನೂನಿನ ಬಗ್ಗೆ ಅವರ ತಿಳುವಳಿಕೆ ದುರ್ಬಲವಾಗಿದೆ ಎಂದರ್ಥ ಅಂತಾ ಅಮಿತ್ ಶಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೂ ಮೋದಿ ಪ್ರಧಾನಿಯಾಗಲ್ಲ: ಅರವಿಂದ್ ಕೇಜ್ರಿವಾಲ್ ಭವಿಷ್ಯ
ನಿನ್ನಯಷ್ಟೇ ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದಿರುವ ಕೇಜ್ರಿವಾಲ್ ಇಂದು ಸುದ್ದಿಗೋಷ್ಠಿ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬುತ್ತಿದೆ. 75 ವರ್ಷದ ಬಳಿಕ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಅವರೇ ನಿರ್ಣಯ ಮಾಡಿದ್ದಾರೆ. ಇದೇ ಕಾರಣ ನೀಡಿ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಸೇರಿದಂತೆ ಹಿರಿಯ ನಾಯಕರನ್ನು ತೆರೆ ಮರೆಗೆ ಸರಿಸಿದ್ದಾರೆ. ಈಗ 75 ವರ್ಷ ತುಂಬುತ್ತಿರುವ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂದು ಘೋಷಿಸಬೇಕು ಎಂದಿದ್ದರು.