ಬರ್ಲಿನ್: ಜರ್ಮನ್‍ನ ಚಿನ್ನದ ವ್ಯಾಪಾರ ನಡೆಸುವ ಪ್ರೋ ಔರಮ್ ಕಂಪನಿಯು ಬರೋಬ್ಬರಿ ಚಿನ್ನದ ನಾಣ್ಯಗಳನ್ನು ಬಳಸಿ 186.5 ಕೋಟಿ ರೂ ವೆಚ್ಚದಲ್ಲಿ ಕ್ರಿಸ್ಮಸ್ ಟ್ರೀಯೊಂದನ್ನು ನಿರ್ಮಿಸಿದೆ.
ಯುರೋಪ್ ಖಂಡದಲ್ಲಿಯೇ ಇಷ್ಟೊಂದು ದುಬಾರಿ ವೆಚ್ಚದ ಕ್ರಿಸ್ಮಸ್ ಟ್ರೀ ಈವರೆಗೂ ತಯಾರಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸುಮಾರು 186.5 ಕೋಟಿ ರೂ. (2.3 ಮಿಲಿಯನ್ ಯುರೋ) ವೆಚ್ಚದಲ್ಲಿ, 63 ಕೆ.ಜಿಯ ಶುದ್ದ ಚಿನ್ನದಲ್ಲಿ ತಯಾರಿಸಿದ 2,018 ಚಿನ್ನದ ನಾಣ್ಯಗಳನ್ನು ಬಳಸಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಲಾಗಿದೆ. ಅಷ್ಟೇ ಅಲ್ಲದೆ ಕ್ರಿಸ್ಮಸ್ ಟ್ರೀಯ ತುದಿಯಲ್ಲಿ ಇಟ್ಟಿರುವ ನಕ್ಷತ್ರ ಆಕಾರದ ಚಿನ್ನದ ನಾಣ್ಯವೊಂದಕ್ಕೆ ಸುಮಾರು 17 ಲಕ್ಷ ರೂ. (21,000 ಯುರೋ) ಖರ್ಚಾಗಿದೆ
ಈ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀ ಪಿರಾಮಿಡ್ ಆಕಾರದಲ್ಲಿದ್ದು, ಟ್ರೀ ತುದಿಯಲ್ಲಿ ಒಂದು ಚಿನ್ನದ ನಕ್ಷತ್ರವನ್ನು ಕೂಡ ಇರಿಸಲಾಗಿದೆ. ಯುರೋಪ್‍ನಲ್ಲಿಯೇ ಅತೀ ದುಬಾರಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಿದ ಹೆಗ್ಗಳಿಕೆಗೆ ಪ್ರೋ ಔರಮ್ ಕಂಪನಿ ಪಾತ್ರವಾಗಿದೆ.
ಪ್ರೋ ಔರಮ್ ಕಂಪನಿಯ ಸಿಬ್ಬಂದಿ ಬೆಂಜಮಿನ್ ಸುಮ್ಮ ಮಾತನಾಡಿ, ಇತ್ತಿಚಿಗೆ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಇಳಿಮುಖವಾಗಿದೆ. ಇಲ್ಲದಿದ್ದರೆ ಈ ಕ್ರಿಸ್ಮಸ್ ಟ್ರೀ ಮೌಲ್ಯ ಇನ್ನೂ ಜಾಸ್ತಿಯಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಯುರೋಪ್‍ನಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಾರ್ವಜನಿಕ ಸಾಲ ಹೆಚ್ಚಾಗಿದೆ. ಆದರಿಂದ ಜನರು ತಮ್ಮ ಉಳಿತಾಯದ ಹಣವನ್ನು ಚಿನ್ನದ ಮೇಲೆ ಹಾಕುತ್ತಿದ್ದಾರೆ. ಹೀಗಾಗಿ ಚಿನ್ನದ ಮೌಲ್ಯ ಕುಸಿದಿದೆ ಎಂದು ಹೇಳಿದರು.
ಕಂಪನಿಯ ಮ್ಯೂನಿಚ್ ಶಾಖೆಯಲ್ಲಿ ಸುಮಾರು 10 ಅಡಿ ಎತ್ತರದ ಅತೀ ದುಬಾರಿ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀಯನ್ನು ಡಿ. 15 ರಿಂದ ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ಪ್ರೋ ಔರಮ್ ಸಿಬ್ಬಂದಿ ತಿಳಿಸಿದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv