ಹಾಸನ: ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ. ಪರ ವಿರೋಧಗಳ ಆರಂಭವಾದ ಯೋಜನೆ ಕಾಮಗಾರಿಗೆ ಅಡ್ಡಿ-ಆತಂಕಗಳು ಎದುರಾಗುತ್ತಲೇ ಇವೆ. ಯೋಜನೆಗಾಗಿ ಸ್ವಾಧೀನವಾದ ಭೂಮಿಗೆ ಸೂಕ್ತ ಪರಿಹಾರ ನೀಡದ ಕಾರಣಕ್ಕೆ ರೊಚ್ಚಿಗೆದ್ದಿರುವ ಹಾಸನ ಜಿಲ್ಲೆ ಆಲೂರು ತಾಲೂಕಿನ ನೂರಾರು ರೈತರು, ಕಳೆದೊಂದು ವಾರದಿಂದ ಯೋಜನೆಗೆ ಅಡ್ಡಿ ಪಡಿಸಿದ್ದಾರೆ. ಇದರಿಂದಾಗಿ ಬೃಹತ್ ಕಾಮಗಾರಿ ಆಲೂರು ಭಾಗದಲ್ಲಿ ಸ್ಥಗಿತಗೊಂಡಿದ್ದು, ಪರಿಹಾರ ಕೊಡುವವರೆಗೂ ಕಾಮಗಾರಿ ನಡೆಯಲು ಬಿಡೋದಿಲ್ಲ ಅಂತ ಭೂ ಮಾಲೀಕರು ಪಟ್ಟು ಹಿಡಿದಿದ್ದಾರೆ.
ಬಯಲುಸೀಮೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಭರವಸೆ ಕೊಟ್ಟಿದ್ದ ಸರ್ಕಾರ ಮಾತು ಬರೀ ಮಾತಾಗಿಯೇ ಉಳಿದಿದೆ. ಹಾಸನದಲ್ಲಿ ಸುಮಾರು 13 ಸಾವಿರ ಕೋಟಿ ರೂಪಾಯಿ ವೆಚ್ಚದ ಎತ್ತಿನಹೊಳೆ ಯೋಜನೆ ಚಾಲನೆ ಪಡೆದು ಈಗಾಗಲೇ ನಾಲ್ಕೈದು ವರ್ಷಗಳೇ ಕಳೆದು ಹೋಗಿವೆ. ಸಕಲೇಶಪುರ ನಂತರ ಆಲೂರು ತಾಲೂಕಿನ ಪಾಳ್ಯ ಹೋಬಳಿ ಮಾರ್ಗವಾಗಿ ಸುಮಾರು 18 ಕಿಲೋ ಮೀಟರ್ ಉದ್ದದ ಎತ್ತಿನಹೊಳೆ ಕಾಲುವೆ ಹಾದು ಹೋಗುತ್ತಿದೆ. ಇದಕ್ಕಾಗಿ 16 ಹಳ್ಳಿಗಳ ವ್ಯಾಪ್ತಿಯ ರೈತರ ಭೂಮಿಯನ್ನು ಪಡೆಯಲಾಗಿದೆ. ಕಾಮಗಾರಿ ಆರಂಭವಾದ 6 ತಿಂಗಳಲ್ಲಿ 1 ಎಕರೆಗೆ 39 ಲಕ್ಷ ರೂಪಾಯಿ, ಖಾಲಿ ಜಮೀನಿಗೆ 24 ಲಕ್ಷ ರೂಪಾಯಿ ಪರಿಹಾರ ಕೊಡ್ತೀವಿ ಅಂದಿದ್ದ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಪರಿಹಾರ ನೀಡೋವರೆಗೆ ಕಾಮಗಾರಿ ಮುಂದುವರಿಸಲು ಬಿಡಲ್ಲ ಅಂತ ರೈತರು ಪಟ್ಟು ಹಿಡಿದಿದ್ದಾರೆ.
ಕಾಮಗಾರಿ ವೇಳೆ ಬೃಹತ್ ಬಂಡೆ ಸಿಡಿಸಲು ಸ್ಫೋಟಕ ಬಳಸುತ್ತಿರುವುದರಿಂದ ಹಲವು ಗ್ರಾಮಗಳ ಮನೆಗಳು ಬಿರುಕು ಬಿಟ್ಟಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ. ಅಲ್ಲದೇ ಜೆಸಿಬಿಗಳ ಮೂಲಕ ಕಾಲುವೆ ತೋಡಿರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೂ ಮನವಿ ಸಲ್ಲಿಸಿದ್ದಾರೆ.
ಕುಡಿಯುವ ನೀರಿಗಾಗಿ ಜಮೀನು ಕಳೆದುಕೊಂಡಿರುವ ರೈತರು ಅತ್ತ ಪರಿಹಾರವೂ ಇಲ್ಲ. ಇತ್ತ ಉಳುಮೆ ಮಾಡಿ ಜೀವನ ಸಾಗಿಸಲು ಜಮೀನು ಇಲ್ಲದೇ ಪರದಾಡುವಂತಾಗಿದೆ. ಇನ್ನಾದರೂ ರೈತರ ಸಂಕಷ್ಟವನ್ನು ಮನದಟ್ಟು ಮಾಡ್ಕೊಂಡು ಸರ್ಕಾರ ಕೊಟ್ಟ ಮಾತು ಈಡೇರಿಸುತ್ತಾ ಕಾದು ನೋಡಬೇಕಿದೆ.
https://www.youtube.com/watch?v=z0npOVG11L4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv