– ನೀರಿನ ಮಹತ್ವ ಗೊತ್ತಾಗಬೇಕಾದ್ರೆ ಕೋಲಾರ ಚಿಕ್ಕಬಳ್ಳಾಪುರ ಭಾಗಕ್ಕೆ ಹೋಗಿ ನೋಡಬೇಕು ಎಂದ ಡಿಸಿಎಂ
ರಾಮನಗರ: ಕನಕಪುರ ತಾಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತನೀರಾವರಿ ಯೋಜನೆಗಿಂದು (Etah Water Irrigation Project) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಂದು ಪರೀಕ್ಷಾರ್ಥ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಮಲೆನಾಡು ಸೇರಿದಂತೆ ಇತರೆ ಕಡೆ ಉತ್ತಮ ಮಳೆಯಾಗುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ ಆದ ಕಾರಣಕ್ಕೆ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇವೆ. ಇದು ನನ್ನ ಬಹುದಿನದ ಕನಸು. ಇದರಿಂದ ಸಾವಿರ ಎಕರೆಗೂ ಹೆಚ್ಚು ಭೂಮಿಗೆ ನೀರಾವರಿ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನ – ಅಮಿತ್ ಶಾ ಆರೋಪ
ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ ಒತ್ತಾಯ ಮಾಡಿ ಅವರನ್ನು ಕರೆದುಕೊಂಡು ಬಂದು ಅರ್ಕಾವತಿ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿಯನ್ನು ಉದ್ಘಾಟಿಸಲಾಗಿತ್ತು. ಈ ಭಾಗದ ರೈತರು ಈ ಯೋಜನೆ ಸಾಕಾರಗೊಳ್ಳುವ ವೇಳೆಯಲ್ಲಿ ಕೇವಲ 3-4 ಸಾವಿರಕ್ಕೆ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ನನಗೆ ಈಗಲೂ ಬೇಸರ ತರಿಸುತ್ತದೆ. ಹಣಕ್ಕೆ ಕಷ್ಟವಿದ್ದ ಕಾಲದಲ್ಲೂ ಎಸ್.ಎಂ ಕೃಷ್ಣ ಅವರ ಕೈಯಿಂದ ಸುಮಾರು 300 ಜನ ರೈತರಿಗೆ ಎಕರೆ ಇಂತಿಷ್ಟು ಎಂದು ಹೆಚ್ಚುವರಿಯಾಗಿ 7 ಕೋಟಿ ರೂ. ಪರಿಹಾರ ಕೊಡಿಸಲಾಯಿತು ಎಂದು ವಿವರಿಸಿದ್ದಾರೆ.
ದೇವರ ಅನುಗ್ರಹದಿಂದ ನಾನೇ ಇಂದು ನೀರಾವರಿ ಸಚಿವನಾಗಿದ್ದೇನೆ. ಇಂತಹ ನೂರು ಯೋಜನೆಗಳನ್ನು ಮಾಡುವ ಶಕ್ತಿ ನೀಡಿದ್ದಾನೆ. ಶಿಂಷಾ ನೀರನ್ನು ಸಾತನೂರು ಹಾಗೂ ಕೆಂಪಮ್ಮನ ದೊಡ್ಡಿವರೆಗೂ ತೆಗೆದುಕೊಂಡು ಹೋಗಲಾಗುತ್ತಿದೆ. ದೊಡ್ಡ ಆಲಹಳ್ಳಿ ಕೆರೆಗೂ ನೀರನ್ನು ತುಂಬಿಸಲಾಗುತ್ತಿದೆ. ಕೈಲಾಂಚ, ಮಾಗಡಿ, ಮಾತೂರು ಕೆರೆ, ಚನ್ನಪಟ್ಟಣ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಯಿತು. ಆದರೂ ನಮ್ಮ ಜನಕ್ಕೆ ಕೆಲಸದ ಮಹತ್ವ ಗೊತ್ತಾಗಲಿಲ್ಲ. ಈ ಭಾಗದ ಜನಕ್ಕೆ ನೀರಿನ ಮಹತ್ವ ಗೊತ್ತಾಗಬೇಕು ಎಂದರೆ, ಕೋಲಾರ ಚಿಕ್ಕಬಳ್ಳಾಪುರ ಭಾಗಕ್ಕೆ ಹೋಗಿ ನೋಡಬೇಕು ಎಂದು ಹೇಳಿದ್ದಾರೆ.
ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ರೈತರು ಬದುಕುತ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆ.ಸಿ ವ್ಯಾಲಿ ಯೋಜನೆಯನ್ನು ಕಾರ್ಯಗತಗೊಳಿಸಿ, ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಕೋಲಾರದ ಕೆರೆಗಳನ್ನು ತುಂಬಿಸಿದ್ದೇವೆ. ಈಗ ಎತ್ತಿನಹೊಳೆಯಿಂದ ಕುಡಿಯುವ ನೀರನ್ನು ಕೊಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಅನರ್ಹ ಕುರಿತು ಟೀಕೆ – ದೇವರೇ ನಿಮಗೆ ಶಿಕ್ಷೆ ಕೊಟ್ಟಿದ್ದಾನೆ ಎಂದ ಬ್ರಿಜ್ ಭೂಷಣ್