ಇಂದು ನೂತನ ಸಂಸತ್ ಭವನ ಲೋಕಾರ್ಪಣೆ ಆಗುತ್ತಿದ್ದು, ಈ ಭವನದಲ್ಲಿ ಸೆಂಗೋಲ್ (Sengol) ಅನ್ನು ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ ಬೆಳಗ್ಗೆಯಿಂದಲೇ ಹಲವು ಕಾರ್ಯಕ್ರಮಗಳ ನಡೆದಿವೆ. ಪೂಜಾ ಪುನಸ್ಕಾರಗಳನ್ನೂ ಮಾಡಲಾಗುತ್ತಿದೆ. ಈಗಾಗಲೇ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಸ್ಥಾಪಿಸಿದ್ದಾರೆ. ಈ ವಿಚಾರವಾಗಿ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಮೋದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Advertisement
ಸೆಂಗೋಲ್ ಎನ್ನುವುದು ತಮಿಳು (Tamil) ಶಕ್ತಿಯ ಸಂಪ್ರದಾಯಿಕ ಚಿಹ್ನೆ. ಇಂತಹ ರಾಜದಂಡ ಭಾರತದ ಹೊಸ ಸಂಸತ್ತಿನ ಕಟ್ಟಡದಲ್ಲಿ ಇರಲಿದೆ ಎನ್ನುವುದೇ ಹೆಮ್ಮೆ. ತಮಿಳರ ಹೆಮ್ಮೆ ಪಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪ್ರಾಮಾಣಿಕ ಧನ್ಯವಾದಗಳನ್ನು ತಿಳಿಸಿವೆ ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
Advertisement
Advertisement
ಏನಿದು ಸೆಂಗೋಲ್ ?: ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಬ್ರಿಟಿಷ್ ಆಡಳಿತ ಹಸ್ತಾಂತರಿಸಿತ್ತು. ಈ ರಾಜದಂಡವನ್ನು ‘ಸೆಂಗೋಲ್’ ಎಂದು ಕರೆಯಲಾಗುತ್ತದೆ. ಇದು ತಮಿಳು ಪದ ‘ಸೆಮ್ಮೈʼನಿಂದ ಬಂದಿದೆ. ಸೆಂಗೋಲ್‌ನ ಇತಿಹಾಸ ಮತ್ತು ಮಹತ್ವ ಅನೇಕರಿಗೆ ತಿಳಿದಿಲ್ಲ. ಹೊಸ ಸಂಸತ್ತಿನಲ್ಲಿ ಇದನ್ನು ಸ್ಥಾಪಿಸುವುದರಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನಮ್ಮ ಆಧುನಿಕತೆಯೊಂದಿಗೆ ಜೋಡಿಸುವ ಪ್ರಯತ್ನವಾಗುತ್ತದೆ. ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅಳವಡಿಸುವ ಯೋಜನೆಯು ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಸೆಂಗೊಲ್ ಈಗ ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿತ್ತು. ಅಲ್ಲಿಂದ ಸಂಸತ್ತಿಗೆ ತಂದು ಪ್ರಧಾನಿ ಮೋದಿಯವರು ಸ್ಪೀಕರ್ ಸ್ಥಾನದ ಬಳಿ ಅದನ್ನು ಸ್ಥಾಪಿಸಿದ್ದಾರೆ.
Advertisement
ಬ್ರಿಟಿಷ್ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂ ಅವರ ಜೊತೆ ಯಾವ ರೀತಿ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚೋಳರ ಇತಿಹಾಸವನ್ನು ತಿಳಿದಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ಸೆಂಗೊಲ್ ನೀಡುವ ಮೂಲಕ ಹಸ್ತಾಂತರಿಸಬಹುದು ಎಂದು ಸಲಹೆ ನೀಡಿದ್ದರು. ಈ ಸಲಹೆ ನೆಹರೂ ಅವರಿಗೆ ಇಷ್ಟವಾಯಿತು. ಭಾರತದ ಸ್ವಾತಂತ್ರ‍್ಯವನ್ನು ಗುರುತಿಸುವ ರಾಜದಂಡವನ್ನು ತಯಾರಿಸುವ ಹೊಣೆಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ವಹಿಸಿದ್ದರು. ಇವರು ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಧೀನಂ ಮಠವನ್ನು ಸಂಪರ್ಕಿಸಿದರು. ಆ ಮಠದ ಶ್ರೀಗಳು ಇದರ ಜವಾಬ್ದಾರಿಯನ್ನು ತೆಗೆದುಕೊಂಡರು. ಮದ್ರಾಸಿನ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಸೆಂಗಲ್‌ನ್ನು ತಯಾರಿಸಿದ್ದು, ಇದು ಐದು ಅಡಿ ಉದ್ದ ಮತ್ತು ನ್ಯಾಯವನ್ನು ಸಂಕೇತಿಸುವ ‘ನಂದಿ’ಯನ್ನು ಹೊಂದಿದೆ.
ವರದಿಗಳ ಪ್ರಕಾರ, ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್‌ಬ್ಯಾಟನ್‌ಗೆ ನೀಡಿದ್ದರು. ನಂತರ ರಾಜದಂಡವನ್ನು ಪಡೆದ ಗಂಗಾಜಲವನ್ನು ಸಿಂಪಡಿಸಿದರು. 1947ರ ಆಗಸ್ಟ್ 14 ರಂದು ಪಂಡಿತ್ ಜವಾಹರಲಾಲ್ ನೆಹರು ಅವರು ಹಲವಾರು ನಾಯಕರು ಮತ್ತು ಉನ್ನತ ಗಣ್ಯರ ಸಮ್ಮುಖದಲ್ಲಿ ಸೆಂಗೊಲ್ ಅನ್ನು ಸ್ವೀಕರಿಸಿದರು. ಇದು ಬ್ರಿಟಿಷರಿಂದ ಸ್ವತಂತ್ರ ಭಾರತದ ಜನರಿಗೆ ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ. ಭಾರತ ಸ್ವಾತಂತ್ರ‍್ಯ ಗಳಿಸಿದ ಮಧ್ಯರಾತ್ರಿಯ 15 ನಿಮಿಷಗಳ ಮೊದಲು ಈ ಸ್ಮರಣೀಯ ಘಟನೆಗಳು ನಡೆದಿತ್ತು. ಪ್ರಧಾನಿ ನೆಹರೂ ರಾಜದಂಡವನ್ನು ಸ್ವೀಕರಿಸುತ್ತಿದ್ದಂತೆ ವಿಶೇಷ ಗೀತೆಯನ್ನು ಮೊಳಗಿಸಲಾಯಿತು.
ತಮಿಳು ಸಂಸ್ಕೃತಿಯಲ್ಲಿ ಚೋಳ ಸಾಮ್ರಾಜ್ಯದ ಕಾಲದಿಂದಲೂ ಸೆಂಗೋಲ್ ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೂತನ ಸಂಸತ್ ಭವನದಲ್ಲಿರುವ ಲೋಕಸಭಾ ಸ್ಪೀಕರ್ ಪೀಠದ ಬಳಿ ರಾಜದಂಡ ಇಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.