ವಿಜಯಪುರ: ಲಫಂಗ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದವರೇ ಹೊರತು ಬಿಜೆಪಿಯವರಲ್ಲ. ಭೀಕರ ಬರ ಅಧ್ಯಯನಕ್ಕಾಗಿ ಬಿಜೆಪಿ ತಂಡ ಮುಂದಾಗಿರುವುದನ್ನು ನೋಡಿ ಆದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಫಂಗ ರಾಜಕಾರಣ ಎಂಬ ಪದವನ್ನು ಯಾವ ಸಿಎಂ ಕೂಡ ಈವರೆಗೆ ಹೇಳಿಲ್ಲ. ಆದ್ರೆ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿರುವ ಸಿದ್ದರಾಮಯ್ಯ ಹೆಣ್ಣು ಹುಡುಕುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಸಿದ್ದಗಂಗಾ ಸ್ವಾಮೀಜಿಗಳ ಕ್ರಿಯಾ ಸಮಾಧಿ ಕಾರ್ಯ ಮುಗಿಯುವವರೆಗೂ ಯಡಿಯೂರಪ್ಪ ಅವರು ಸಿದ್ದಗಂಗಾ ಮಠದಲ್ಲೇ ಇದ್ದರು. ಇಹಲೋಕ ತ್ಯಜಿಸಿದವರ ಹೆಸರು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ ಉದ್ಧಾರ ಆಗಲ್ಲ. ಪ್ರತಿಪಕ್ಷದಲ್ಲಿ ಕುಳಿತಿರುವ ಅನುಭವ ಸಿದ್ದರಾಮಯ್ಯ ಅವರಿಗಿಲ್ಲ. ಅವರು ಕಾಂಗ್ರೆಸ್ಸಿಗೆ ಹೋದಾಗ ಎಷ್ಟು ಹಣ ಪಡೆದಿದ್ದರು ಎಂಬುದನ್ನು ಬಹಿರಂಗ ಪಡಿಸಲಿ. ಕಾಂಗ್ರೆಸ್ಸಿನಲ್ಲಿ ಸಚಿವರು ಮತ್ತು ಶಾಸಕರಲ್ಲಿ ಅಸಮಾಧಾನ ಇದೆ. ಸುಭಾಷ್ ಗುತ್ತೆದಾರ್ ಅವರಿಗೆ ಆಫರ್ ಕೊಟ್ಟಿಲ್ಲ ಎಂದು ದೇವರನ್ನು ನಂಬಿರುವ ಎಚ್. ಡಿ. ಕುಮಾರಸ್ವಾಮಿ ಹೇಳಲಿ. ವೇಣುಗೋಪಾಲ್, ದಿನೇಶ್ ಗುಂಡೂರಾವ್ ಕಾಗದದ ಹುಲಿ. ರೆಸಾರ್ಟಿನಲ್ಲಿ ಶಾಸಕನ ಮೇಲೆ ಕೊಲೆ ಯತ್ನ ಮಾಡಲಾಗಿದೆ. ಲಫಂಗ ರಾಜಕಾರಣ ಮಾಡುತ್ತಿರುವವರು ಯಾರು? ತಾಕತ್ತಿದ್ದರೆ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ಹೊರ ಬರಲಿ ಎಂದು ಸವಾಲ್ ಹಾಕಿದರು.
ಎರಡು ತಿಂಗಳ ಹಿಂದೆಯಿಂದಲೇ 6 ತಂಡಗಳಂದು ರಚಿಸಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ವಿಧಾನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿಲ್ಲ. ಯಾವ ಉಸ್ತುವಾರಿ ಸಚಿವರು ಬರ ಪಿಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ, ಪರಿಹಾರ ಘೋಷಿಸಿಲ್ಲ. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಬರ ಅಧ್ಯಯನ ಪ್ರವಾಸಕ್ಕೆ ಹೋಗಲಾಗುವುದು ಎಂದು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದರು. ಆದರೂ ಪ್ರವಾಸ ಮಾಡಿಲ್ಲ. ಬಿಜೆಪಿ ಎರಡನೇ ಬಾರಿ ಬರ ಪ್ರವಾಸ ಮಾಡಿದ ನಂತರ ಸರ್ಕಾರದಿಂದ ಬರ ಅಧ್ಯಯನ ಪ್ರವಾಸ ಆರಂಭವಾಯ್ತು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರದ ಬಗ್ಗೆ ಪರಿಶೀಲಿಸಲು ಸಿಎಂ ಕಳುಹಿಸಬೇಕು, ರೈತರಿಗೆ ಧೈರ್ಯ ಹೇಳಬೇಕು. ಈವರೆಗೂ ಸಾಲಮನ್ನಾ ತಲುಪಿಲ್ಲ. ರಾಜಕೀಯ ತಂತ್ರಗಾರಿಕೆ ಬಿಟ್ಟು ಬಜೆಟ್‍ನಲ್ಲಿ ಸಾಲಮನ್ನಾಕ್ಕಾಗಿ ಹಣ ಮೀಸಲಿಡಲಿ ಎಂದು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಚಿವರೆಲ್ಲ ಅಧಿಕಾರಿಗಳ ವರದಿಯನ್ನೇ ನಂಬಿ ಕುಳಿತಿದ್ದಾರೆ. ವರ್ಗಾವಣೆ ದಂಧೆ ಸಮ್ಮಿಶ್ರ ಸರ್ಕಾರದ ಇಬ್ಬರು ನಾಯಕರಿಗೆ ದೊಡ್ಡ ವರವಾಗಿದೆ. ಸಿಎಂ ಕುಮಾರ ಸ್ವಾಮಿ ಹಾಗೂ ಸಚಿವ ರೇವಣ್ಣ ಇದರಲ್ಲಿದ್ದಾರೆ. ಆದ್ರೆ ಈ ಬಗ್ಗೆ ಕಾಂಗ್ರೆಸ್ ನಾಯಕರಿಗೆ ತಿಳಿದಿದ್ದರೂ ಇದಕ್ಕೆ ಬ್ರೇಕ್ ಹಾಕಲು ಇಚ್ಛಿಸುತ್ತಿಲ್ಲ. ರಾಜಕೀಯ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಆಡಳಿತ ಕುಲಗೆಟ್ಟು ಹೋಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಹೆದರುತ್ತಿದ್ದಾರೆ. ಕಾಂಗ್ರೆಸ್ ಅವರು ಬರುವ ಚುನಾವಣೆಗೆ ಬೇಕಾಗುವ ಹಣವನ್ನು ಕೂಡಿಡುತ್ತಿದ್ದಾರೆ ಅಂತ ಅನುಮಾನವಿದೆ ಎಂದರು.
ಆನಂದ್ ಸಿಂಗ್ ಮೇಲೆ ಹಲ್ಲೆ ಸಂದರ್ಭದಲ್ಲಿ ಡಿಕೆಶಿ ಸಹೋದರರು ಸುಳ್ಳು ಹೇಳಿದ್ದರು. ಬಿಜೆಪಿ ಯಾವುದೇ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ಅವರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯಲ್ಲ. ಕಾಂಗ್ರೆಸ್ ಶಾಸಕರನ್ನು ಕರೆದರೆ ಅವರ ಪತ್ನಿಯರು ಕಳುಹಿಸಿಕೊಡೊಲ್ಲ. ಕಾಂಗ್ರೆಸ್ ಪಕ್ಷದ್ದು ಗೂಂಡಾ ಸಂಸ್ಕೃತಿಯೋ ಇಲ್ಲವೇ ಬುದ್ಧಿ ಭ್ರಮಣೆಯಾಗಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಜನರಿಗೆ ಗೊತ್ತಿದೆ. ವಿಧಾನ ಸಭೆ ಚುನಾವಣೆಯಲ್ಲಿ 104 ಸ್ಥಾನ ಪಡೆದಿದ್ದೇವೆ. ಭೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿ ಎಂಬುದು ನನ್ನ ಆಸೆ. ಕಾಂಗ್ರೆಸ್-ಜೆಡಿಎಸ್ ಸೀಟು ಹೊಂದಾಣಿಕೆಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಈಶ್ವರಪ್ಪ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv