ಉಡುಪಿ: ದೇಶದ ಎಲ್ಲಾ ಕಡೆ ನಿರ್ನಾಮವಾಗಿರುವ ಕಾಂಗ್ರೆಸ್ ಹಿಜಬ್, ಹಲಾಲ್ ರಾಷ್ಟ್ರ ಧ್ವಜದ ಬಗ್ಗೆ ಚರ್ಚೆ ಮಾಡುತ್ತಿದೆ. ಇಲ್ಲಿಯ ಅನ್ನ ತಿಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರನ್ನು ನಾವು ಬಿಡುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸಲ್ಮಾನರನ್ನು ತೃಪ್ತಿ ಪಡಿಸುವ ಪ್ರಯತ್ನ ಒಳ್ಳೆಯದಲ್ಲ. ನಾವು ಹುಟ್ಟಿದಾಗಿನಿಂದ ಹಿಂದುತ್ವದವರು. ಈಗಲೂ ಹಿಂದುತ್ವ. ರಾಷ್ಟ್ರಭಕ್ತ ಮುಸಲ್ಮಾನರು, ಸ್ವತಂತ್ರ್ಯ ಹೋರಾಟಗಾರ ಮುಸಲ್ಮಾನರನ್ನು ನಾವು ಗೌರವಿಸುತ್ತೇವೆ ಎಂದರು. ಇದನ್ನೂ ಓದಿ: ಜಟ್ಕಾ ಮೀಟ್ ಅಂಗಡಿ ತೆರೆದು ಹಿಂದೂ ಧರ್ಮದ ಯುವಕರು ಆರ್ಥಿಕವಾಗಿ ಬಲಿಷ್ಠರಾಗಿ: ಕಾಳಿ ಸ್ವಾಮಿ
ಈ ವೇಳೆ ಹರ್ಷ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಈಶ್ವರಪ್ಪ ಹರ್ಷ ಕೊಲೆಯ ಎನ್‌ಐಎ ತನಿಖೆಯಲ್ಲಿದ್ದು, ನ್ಯಾಯ ಸಿಗುವ ನಂಬಿಕೆಯಿದೆ. ಹಿಂದುಗಡೆಯಿಂದ ಬಂದು ಕೊಚ್ಚಿ ಹೋದವರನ್ನು ಗಂಡಸರು ಎಂದು ಕರೆಯಲು ಸಾಧ್ಯವೇ? ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ನಮಗೆ ಒಂದು ಸೀಟು ಕೂಡ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ನಾವು ಚುನಾವಣೆಗೂ ಮುನ್ನ ಏನನ್ನೂ ಕೊಚ್ಚಿಕೊಳ್ಳುವುದಿಲ್ಲ. ಚುನಾವಣೆ ಬಂದಾಗ ನಾವು ಉತ್ತರ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸೋಮವಾರ ಆಪ್ ಧ್ವಜ ಹಿಡಿಯಲಿದ್ದಾರೆ ಭಾಸ್ಕರ್ ರಾವ್
ನಾನೇ ಮುಖ್ಯಮಂತ್ರಿ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತರು. ಉಪಚುನಾವಣೆ, ಗ್ರಾಮ ಪಂಚಾಯತಿ ಎಲ್ಲವನ್ನೂ ಬಿಜೆಪಿ ಗೆದ್ದುಕೊಂಡಿತು. ಕಾಂಗ್ರೆಸ್ ಬರೀ ಘೋಷಣೆ ಮಾಡುತ್ತದೆ, ಬಿಜೆಪಿ ಸಾಧನೆ ಮಾಡುತ್ತದೆ. ಈ ಬಾರಿ ರಾಜ್ಯದಲ್ಲಿ 150ಕ್ಕಿಂತ ಹೆಚ್ಚು, ಎಲ್ಲಾ 28 ಲೋಕಸಭಾ ಸ್ಥಾನ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಉತ್ತರಿಸಿದ ಈಶ್ವರಪ್ಪ, ಬೆಲೆ ಏರಿಕೆ ಇಂದು-ನಿನ್ನೆಯದಲ್ಲ. ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ವಿದೇಶಿ ವಿನಿಮಯದ ಮೇಲೆ ಪೆಟ್ರೋಲ್-ಡೀಸೆಲ್ ಅವಲಂಬಿತವಾಗಿದೆ. ಕೇಂದ್ರ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಳ್ಳುತ್ತದೆ ಎಂದು ಹೇಳಿದರು.